ರಸ್ತೆ ಬದಿ ಶಿಶುವಿನ ಮೃತದೇಹ ಪತ್ತೆ ಪ್ರಕರಣ: ಉಸಿರುಗಟ್ಟಿಸಿ ಮಗುವನ್ನು ಕೊಲೆಗೈದಿರುವುದಾಗಿ ಯುವತಿ ಹೇಳಿಕೆ; ಯುವಕನಿಗಾಗಿ ಶೋಧ
ಕೊಚ್ಚಿ: ಕೊಚ್ಚಿಯಲ್ಲಿ ನವಜಾತ ಶಿಶುವಿನ ಮೃತದೇಹ ರಸ್ತೆಬದಿ ಪತ್ತೆಯಾದ ಘಟನೆಗೆ ಸಂಬಂಧಿಸಿ ಪೊಲೀಸರು ಮಹತ್ತರ ಮಾಹಿತಿಗ ಳನ್ನು ಸಂಗ್ರಹಿಸಿಕೊಂಡಿದ್ದಾರೆ. ಕೊಚ್ಚಿ ಬಳಿಯ ಪನಂಬಳ್ಳಿ ನಗರದ ವಿದ್ಯಾನಗರ ಎಂಬಲ್ಲಿನ ಫ್ಲಾಟ್‌ನಲ್ಲಿ ನವಜಾತ ಶಿಶುವನ್ನು ಕೊಲೆಗೈಯ್ಯಲಾಗಿದೆಯೆಂದು ದೃಢೀಕರಿಸಲಾಗಿದೆ. ಮಗುವನ್ನು ಉಸಿರುಗಟ್ಟಿಸಿ ಕೊಲೆಗೈದ ಬಳಿಕ ಮೃತದೇಹವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿ ಫ್ಲಾಟ್‌ನಿಂದ ಹೊರಗೆ ಎಸೆಯಲಾಗಿದೆಯೆಂದು ತನಿಖೆಯಲ್ಲಿ ತಿಳಿದುಬಂದಿದೆ ಮಗುವಿನ ತಾಯಿಯೇ ಈ ವಿಷಯವನ್ನು ಪೊಲೀಸರಲ್ಲಿ ತಿಳಿಸಿದ್ದಾಳೆ. ಅವಿವಾಹಿತಳಾದ ಯುವತಿ ಗರ್ಭಿಣಿಯಾಗಿದ್ದು ನಿನ್ನೆ ಬೆಳಿಗ್ಗೆ ಶೌಚಾಲಯದಲ್ಲಿ ಹೆರಿಗೆ ನಡೆದಿದೆ. ಮಗು ಜನಿಸಿದಾಕ್ಷಣ ಅದರ ಬಾಯಿಗೆ ಬಟ್ಟೆ ತುರುಕಿಸಿ ಕುತ್ತಿಗೆಗೆ ಶಾಲು ಬಿಗಿದು ಕೊಲೆಗೈದಿರುವುದಾಗಿ ಯುವತಿ ಪೊಲೀಸರಲ್ಲಿ ತಿಳಿಸಿದ್ದಾಳೆ.
ಮಗುವನ್ನು ಉಪೇಕ್ಷಿಸಲು ಮೊದಲು ತೀರ್ಮಾನಿಸಿದ್ದಳು. ಆದರೆ ತಾಯಿ ಶೌಚಾಲಯದ ಬಾಗಿಲು ತಟ್ಟಿ ಕರೆದಿದ್ದಾಳೆ. ಇದರಿಂದ ಬೇರೆ ದಾರಿಯಿಲ್ಲದೆ ಮಗುವನ್ನು ಕೊಲೆಗೈದು ಮೃತದೇಹವನ್ನು ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ತುಂಬಿಸಿ ಹೊರಗೆ ಎಸೆದಿರುವುದಾಗಿ ಯುವತಿ ತಿಳಿಸಿದ್ದಾಳೆ. ಗರ್ಭಛಿದ್ರಗೊಳಿಸಲು ಮೊದಲು ಯುವತಿ ನಿರ್ಧರಿಸಿದ್ದರೂ ಅದು ಸಾಧ್ಯವಾಗಿರಲಿಲ್ಲವೆನ್ನಲಾಗಿದೆ.
ಇದೇ ವೇಳೆ ಯುವತಿ ಗರ್ಭಿಣಿಯಾಗಲು ಕಾರಣನಾದ ವ್ಯಕ್ತಿ ಯಾರೆಂದು ತಿಳಿದುಬಂದಿಲ್ಲ. ತೃಶೂರು ನಿವಾಸಿಯಾದ ಓರ್ವ ನರ್ತಕನ ಮೇಲೆ ಸಂಶಯ ಮೂಡಿದ್ದು, ಆತನನ್ನು ಪತ್ತೆಹಚ್ಚಲಿರುವ ಪ್ರಯತ್ನ ಮುಂದುವರಿಯುತ್ತಿದೆ. ಆದರೆ ಆತನ ಕುರಿತಾಗಿ ಯುವತಿ ಯಾವುದೇ ಮಾಹಿತಿ ನೀಡಿಲ್ಲ. ಇದು ತನಿಖೆಗೆ ತೊಡಕಾಗಿರುವುದಾಗಿ ಹೇಳಲಾ ಗುತ್ತಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಮಾಹಿತಿ ಸಂಗ್ರಹಿಸುವ ಅಂಗವಾಗಿ ಯುವತಿಯ ಮೊಬೈಲ್ ಫೋನ್ ಪೊಲೀಸರು ಕಸ್ಟಡಿಗೆ ತೆಗೆದುಕೊಂಡು ಪರಿಶೀಲಿಸುತ್ತಿದ್ದಾರೆ.