ರಾ. ಹೆದ್ದಾರಿ ನಿರ್ಮಾಣ ವೇಳೆ ಮಣ್ಣು ಕುಸಿದು ಕಾರ್ಮಿಕ ಮೃತ್ಯು: ಇಬ್ಬರಿಗೆ ಗಂಭೀರ

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯ ನಿರ್ಮಾಣ ಕೆಲಸದ ವೇಳೆ ಗುಡ್ಡೆ ಬದಿಯ ಮಣ್ಣು ಕುಸಿದು ಬಿದ್ದು ವಲಸೆ ಕಾರ್ಮಿಕನಾದ ಯುವಕ ಸಾವನ್ನಪ್ಪಿ, ಇಬ್ಬರು ಗಂಭೀರ ಗಾಯಗೊಂಡ ದಾರುಣ ಘಟನೆ ಚೆರುವತ್ತೂರು ಮಟ್ಟಲಾಯಿಯಲ್ಲಿ ನಡೆದಿದೆ. ಪಶ್ಚಿಮ ಬಂಗಾಳದ ಕೊಲ್ಕತ್ತ ಮೋತ್ತಿನ ಗ್ರಾಮ ನಿವಾಸಿ ಮುನ್‌ತಾಜ್ ಮಿರ್ (18) ಸಾವನ್ನಪ್ಪಿದ ದುರ್ದೈವಿ ಯುವಕ. ಈತನ ಜೊತೆಗೆ ಆತನ ಗ್ರಾಮದವರೇ ಆಗಿರುವ ಮುನ್ನಾಲ್ ಲಾಸ್ಕರ್ (38) ಮತ್ತು ಮೋಹನ್ ತೇಜಾರ್ (18) ಎಂ ಬವರು ಗಂಭೀರ ಗಾಯಗೊಂಡಿದ್ದು, ಅವರನ್ನು ಪರಿಯಾರಂನಲ್ಲಿರುವ ಕಣ್ಣೂರು ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿ ಸಲಾಗಿದೆ.

ರಾಷ್ಟ್ರೀಯ ಹೆದ್ದಾರಿಯ ನೀಲೇ ಶ್ವರ- ತಳಿಪರಂಬ ರೀಚ್‌ಗೊಳಪಟ್ಟ ಚೆರುವತ್ತೂರು ಮಟ್ಟಲಾಯಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಗುಡ್ಡೆ ಬದಿ ಭದ್ರತಾ ಗೋಡೆ ನಿರ್ಮಿಸಲೆಂದು ಕಬ್ಬಿಣದ ಗ್ರಿಲ್ಸ್‌ಗಳನ್ನು ಕಟ್ಟಿ ಅದಕ್ಕೆ ಕಾಂಕ್ರೀಟ್ ಹಾಕುವ ಕೆಲಸವೂ ನಡೆಯುತ್ತಿದೆ. ಅಲ್ಲಿ ನಿನ್ನೆ ನಿರ್ಮಾಣ ಕೆಲಸ ನಡೆಯುತ್ತಿದ್ದಂತೆಯೇ ಆ ವೇಳೆ ಆ ಗುಡ್ಡೆಯ ಮಣ್ಣು ಕುಸಿದು  ನಿರ್ಮಾಣ ಕೆಲಸದಲ್ಲಿ ನಿರತರಾಗಿದ್ದ ಮೂವರು ಕಾರ್ಮಿಕರ ಮೇಲೆ ಬಿದ್ದಿದೆ. ತಕ್ಷಣ ಪೊಲೀಸರು, ಅಗ್ನಿಶಾಮಕ ದಳ, ಊರವರು ಸೇರಿ ನಡೆಸಿದ ರಕ್ಷಣಾ ಕಾರ್ಯಾಚರಣೆಯಲ್ಲಿ ಮಣ್ಣಿನಡಿ ಸಿಲುಕಿಕೊಂಡಿದ್ದ ಮೂವರು ಕಾರ್ಮಿಕರನ್ನು ಮೇಲಕ್ಕೆತ್ತಿ ಕಣ್ಣೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಿದರೂ, ಆ ವೇಳೆ ಮುನ್‌ತಾಜ್ ಮಿರ್‌ನ ಪ್ರಾಣ ಪಕ್ಷಿ ಹಾರಿಹೋಗಿತ್ತು.

ಈ ದುರ್ಘಟನೆಯಲ್ಲಿ ಮೃತಪಟ್ಟ ಯುವಕ ಸೇರಿ ಆತನ ಅದೇ ಗ್ರಾಮದ ಐದು ಮಂದಿ ಹತ್ತು ದಿನಗಳ ಹಿಂದೆಯಷ್ಟೇ ಚೆರುವತ್ತೂರಿನ ರಾಷ್ಟ್ರೀಯ ಹೆದ್ದಾರಿ ನವೀಕರಣ ಕೆಲಸಕ್ಕೆ ಸೇರ್ಪಡೆಗೊಂಡಿದ್ದರು. ನಿನ್ನೆ ಈ ಐದು ಮಂದಿ ಪೈಕಿ ನಾಲ್ವರು ಗುಡ್ಡೆಗೆ ರಕ್ಷಣಾ ಬೇಲಿ ನಿರ್ಮಿಸುವ ಕೆಲಸದಲ್ಲಿ  ತೊಡಗಿದ್ದರು. ಇವರ ಪೈಕಿ ಮೂವರು ಒಂದೇ ಸ್ಥಳದಲ್ಲಿ ಕೆಲಸದಲ್ಲಿ ತೊಡಗಿದ್ದರು. ಓರ್ವ ಅಲ್ಪ ದೂರ ಕೆಲಸ ಮಾಡುತ್ತಿದ್ದನು. ಅದರಿಂದಾಗಿ ಆತ ಅನಾಹುತದಿಂದ ಪಾರಾಗಿದ್ದಾನೆ. ಮಣ್ಣು ಕುಸಿದು ಬೀಳುವ ವೇಳೆ ಅದರಲ್ಲಿ ದೊಡ್ಡ ಕಲ್ಲು ಮುನ್‌ತಾಜ್ ಮಿರ್‌ನ ತಲೆಗೆ ಬಡಿದಿತ್ತೆಂದೂ ಅದುವೇ ಆತನ ಸಾವಿಗೆ ಕಾರಣವಾಯಿತೆಂದು ಹೇಳಲಾಗುತ್ತಿದೆ.

You cannot copy contents of this page