ರಾಷ್ಟ್ರೀಯ ಕಬ್ಬಡ್ಡಿ ತಾರೆಯ ಆತ್ಮಹತ್ಯೆ : ಪತಿ, ಅತ್ತೆಗೆ ಕಠಿಣ ಸಜೆ, ಜುಲ್ಮಾನೆ
ಕಾಸರಗೋಡು: ಬೇಡಡ್ಕ ಚೆರಿಪ್ಪಾಡಿ ನಿವಾಸಿ ರಾಷ್ಟ್ರೀಯ ಕಬ್ಬಡ್ಡಿ ತಾರೆ ಪ್ರೀತಿ (27) ಎಂಬವರು ಆತ್ಮಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ಅವರ ಪತಿ ಮತ್ತು ಅತ್ತೆಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (1)ರ ನ್ಯಾಯಾಧೀಶ ರಾದ ವಿ. ಮನೋಜ್ ಕಠಿಣ ಸಜೆ ಮತ್ತು ಜುಲ್ಮಾನೆ ವಿಧಿಸಿ ತೀರ್ಪು ನೀಡಿ ದ್ದಾರೆ. ಇದರಂತೆ ಮೃತ ಪ್ರೀತಿಯವರ ಪತಿ ವೆಸ್ಟ್ ಎಳೇರಿ ಮಾಂಙಾಡ್ ಪೊರವಂಕರೆದ ರಾಖೇಶ್ ಕೃಷ್ಣನ್(38) ನಿಗೆ ನ್ಯಾಯಾಲಯ ಏಳು ವರ್ಷ ಸಜೆ ಮತ್ತು ಆತನ ತಾಯಿ ಶ್ರೀಲತ (56)ಳಿಗೆ ಐದು ವರ್ಷ ಕಠಿಣ ಸಜೆ ವಿಧಿಸಲಾಗಿದೆ. ಇದರ ಹೊರತಾಗಿ ಆರೋಪಿಗಳಿಗೆ ತಲಾ ಒಂದು ಲಕ್ಷ ರೂ.ನಂತೆ ಜುಲ್ಮಾನೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿಗಳು ಆರು ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ ಎಂದೂ ತೀರ್ಪಿನಲ್ಲಿ ತಿಳಿಸಲಾಗಿದೆ.
ಇದರ ಹೊರತಾಗಿ ವರದಕ್ಷಿಣೆ ಗಾಗಿ ಕಿರುಕುಳ ನೀಡಿದ ಸೆಕ್ಷನ್ ಪ್ರಕಾರ ಈ ಇಬ್ಬರು ಆರೋಪಿಗಳಿಗೆ ನ್ಯಾಯಾಲಯ ತಲಾ ಎರಡು ವರ್ಷಗಳ ಸಜೆ ಹಾಗೂ ತಲಾ ಒಂದು ಲಕ್ಷ ರೂ.ನಂತೆ ಜುಲ್ಮಾನೆಯನ್ನೂ ವಿಧಿಸಿದೆ. ಈ ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿಗಳು ಎರಡು ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ ಎಂದೂ, ಶಿಕ್ಷೆಯನ್ನು ಆರೋಪಿಗಳು ಒಟ್ಟಿಗೇ ಅನುಭವಿಸಿದರೆ ಸಾಕೆಂದೂ ತೀರ್ಪಿನಲ್ಲಿ ತಿಳಿಸಲಾಗಿದೆ.
ಆರೋಪಿಗಳು ಜುಲ್ಮಾನೆ ಪಾವತಿಸಿದಲ್ಲಿ ಆ ಮೊತ್ತವನ್ನು ಮೃತ ಪ್ರೀತಿಯ ಮಗಳಿಗೆ ನೀಡಬೇಕೆಂದೂ ತೀರ್ಪಿನ ನ್ಯಾಯಾಲಯ ತಿಳಿಸಿದೆ. ೨೦೧೭ ಆಗಸ್ಟ್ ೧೮ರಂದು ಪ್ರೀತಿ ಚೆರಿಪ್ಪಾಡಿಯಲ್ಲಿರುವ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದಿದ್ದರು. ಅದಕ್ಕೆ ಸಂಬಂಧಿಸಿ ಅವರ ಪತಿ ಮತ್ತು ಅತ್ತೆ ಮತ್ತು ಮಾವನ ವಿರುದ್ಧ ಬೇಡಗ ಪೊಲೀಸರು ಆತ್ಮಹತ್ಯೆಗೆ ಪ್ರೇರಣೆ ನೀಡಿದ ಆರೋಪದಂತೆ ಪ್ರಕರಣ ದಾಖಲಿಸಿಕೊಂಡಿದ್ದರು. ಈ ಮಧ್ಯೆ ಆರೋಪಿಗಳಲ್ಲೋರ್ವರಾಗಿದ್ದ ಮೃತರ ಮಾವ ನಿಧನ ಹೊಂದಿದ್ದರು. ಅಂದು ಕಾಸರಗೋಡು ಡಿವೈಎಸ್‌ಪಿ ಯಾಗಿದ್ದ ಎಂ.ವಿ. ಸುಕುಮಾರನ್ ಈ ಪ್ರಕರಣದ ಬಗ್ಗೆ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರೋಸಿಕ್ಯೂಷನ್ ಪರ ಹೆಚ್ಚುವರಿ ಪಬ್ಲಿಕ್ ಪ್ರೋಸಿಕ್ಯೂ ಟರ್ ಇ. ಲೋಹಿತಾಕ್ಷನ್ ಮತ್ತು ಆದಿರಾ ಬಾಲನ್ ನ್ಯಾಯಾಲ ಯದಲ್ಲಿ ವಾದಿಸಿದ್ದಾರೆ.