ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ: ಮಂಗಲ್ಪಾಡಿ, ಕುಣಿಯಾದಲ್ಲಿ ಅಂಡರ್ ಪ್ಯಾಸೇಜ್ ನಿರ್ಮಿಸುವಂತೆ ಆಗ್ರಹಿಸಿ ಕೇಂದ್ರ ಸಚಿವರಿಗೆ ಎಂ.ಎಲ್. ಅಶ್ವಿನಿ ಮನವಿ ಸಲ್ಲಿಕೆ
ನಾಗ್ಪುರ: ಕಾಸರಗೋಡು ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಗೆ ಸಂಬಂಧಿಸಿ ತಲೆದೋರಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ಮಹಿಳಾ ಮೋರ್ಛಾ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯೆ ಎಂ.ಎಲ್. ಅಶ್ವಿನಿ ಮಹಾರಾಷ್ಟ್ರದ ನಾಗ್ಪುರದಲ್ಲಿ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿಯವರನ್ನು ಸಂದರ್ಶಿಸಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಉಪ್ಪಳ ಮಂಗಲ್ಪಾಡಿ ಮತ್ತು ಕುಣಿಯಾದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಸಂಬಂಧಿಸಿ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಅಶ್ವಿನಿಯವರು ಮನವಿಯಲ್ಲಿ ಕೇಂದ್ರ ಸಚಿವರ ಗಮನಕ್ಕೆ ತಂದಿದ್ದಾರೆ.
ಮಂಗಲ್ಪಾಡಿ ಗ್ರಾಮ ಪಂಚಾಯತ್ ಕಾರ್ಯಾಲಯ ಮತ್ತು ಕುಣಿಯ ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯ ಪರಿಸರದಲ್ಲಿ ಅಂಡರ್ ಪ್ಯಾಸೇಜ್ ಅಥವಾ ಫೂಟ್ ಓವರ್ ಬ್ರಿಡ್ಜ್ ನಿರ್ಮಿಸಬೇಕು, ಅದಕ್ಕಾಗಿ ತುರ್ತು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಅಶ್ವಿನಿ ಸಚಿವರಲ್ಲಿ ವಿನಂತಿಸಿಕೊಂ ಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯನ್ನು ಒಂದೆಡೆ ಷಟ್ಪಥವಾಗಿ ಅಭಿವೃದ್ಧಿಗೊಳಿಸುತ್ತಿರುವಂತೆಯೇ ಅದು ಇನ್ನೊಂದೆಡೆ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಉತ್ಸವ ಆಚರಣೆಗಳಿಗೆ ಅಡಚಣೆ ಸೃಷ್ಟಿಸುತ್ತಿದೆ. ಅದಕ್ಕೆ ಪರಿಹಾರ ಕಂಡುಕೊಳ್ಳಬೇಕೆಂದು ಐಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರ ಸಮಿತಿಯ ಮನವಿ ಹಾಗೂ ಕುಣಿಯಾದ ವಿವಿಧ ಸಂಸ್ಥೆಗಳು, ವಿದ್ಯಾರ್ಥಿಗಳು ಹಾಗೂ ಇತರರ ಸುರಕ್ಷತೆ ಹಾಗೂ ಸೌಕರ್ಯವನ್ನು ಪರಿಗಣಿಸಿ ಅಂಡರ್ ಪ್ಯಾಸೇಜ್ ನಿರ್ಮಿಸಲು ಅಗತ್ಯದ ಕ್ರಮ ಕೈಗೊಳ್ಳಬೆಕೆಂದು ಕೋರಿ ಕುಣಿಯಾ ಜಿಪಿಎಚ್‌ಎಸ್‌ಎಸ್‌ನ ಸಂಬಂಧಪಟ್ಟವರ ಮನವಿಯನ್ನೂ ಅಶ್ವಿನಿ ಕೇಂದ್ರ ಸಚಿವರಿಗೆ ಇದೇ ಸಂದರ್ಭದಲ್ಲಿ ಹಸ್ತಾಂತರಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳಬೇಕೆಂದೂ ಕೇಳಿಕೊಂಡಿದ್ದಾರೆ.