ಲೋಕಸಭಾ ಚುನಾವಣೆ: ೧೬ರಲ್ಲಿ ಬಿಜೆಪಿ, ೪ರಲ್ಲಿ ಬಿಡಿಜೆಎಸ್ ಸ್ಪರ್ಧೆ
ತಿರುವನಂತಪುರ: ಲೋಕಸಭಾ ಚುನಾವಣೆಯಲ್ಲಿ ಎನ್ಡಿಎಯ ಕೇರಳ ಘಟಕದಲ್ಲಿ ಸೀಟು ಹಂಚಿಕೆ ಕ್ರಮ ಪೂರ್ಣಗೊಂಡಿದೆ ಎಂದು ಎನ್ಡಿಎ ಉಪಾಧ್ಯಕ್ಷ ಪಿ.ಕೆ. ಕೃಷ್ಣದಾಸ್ ಮತ್ತು ಸಂಚಾಲಕ ತುಷಾರ್ ವೆಳ್ಳಾಪಳ್ಳಿ ತಿಳಿಸಿದ್ದಾರೆ. ಎನ್ಡಿಎಯ ಎಲ್ಲಾ ಘಟಕ ಪಕ್ಷಗಳಲ್ಲೂ ಸೀಟು ಹಂಚಿಕೆ ಬಗ್ಗೆ ಚರ್ಚೆ ನಡೆಸಿ ಅವರ ಬೇಡಿಕೆಗಳನ್ನು ಆಲಿಸಲಾಗಿದೆ. ಅದನ್ನು ಬಿಜೆಪಿಯ ರಾಜ್ಯ ಸಮಿತಿಯು ಕೇಂದ್ರ ನೇತೃತ್ವಕ್ಕೆ ತಿಳಿಸಲಿದೆ. ಆ ಬಳಿಕವಷ್ಟೇ ಸೀಟು ಹಂಚಿಕೆ ವಿಷಯದಲ್ಲಿ ಅಂತಿಮ ತೀರ್ಮಾನ ಉಂಟಾಗಲಿದೆ ಎಂದೂ ಅವರು ಹೇಳಿದ್ದಾರೆ.
ಕೇರಳದ ೨೦ ಲೋಕಸಭಾ ಕ್ಷೇತ್ರಗಳ ಪೈಕಿ ೧೬ರಲ್ಲಿ ಬಿಜೆಪಿ ಮತ್ತು ೪ರಲ್ಲಿ ಬಿಡಿಜೆಎಸ್ ಸ್ಪರ್ಧಿಸುವ ಹೊಂದಾಣಿಕೆಗೆ ಈಗ ಬರಲಾಗಿದೆ. ಎನ್ಡಿಎಯ ಕೇರಳ ಘಟಕದಲ್ಲಿ ಒಟ್ಟು ಎಂಟು ರಾಜಕೀಯ ಪಕ್ಷಗಳು ಒಳ ಗೊಂಡಿವೆ. ಇದರಲ್ಲಿ ಕೆಲವು ಪಕ್ಷಗಳು ತಮಗೂ ಸೀಟು ನೀಡಬೇಕೆಂಬ ಬೇಡಿಕೆಯನ್ನು ಮುಂದಿರಿಸಿದೆ.
ಲೋಕಸಭಾ ಚುನಾವಣೆಗೆ ಸಂಬಂಧಿಸಿ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯ ಮೊದಲ ಸಭೆ ದಿಲ್ಲಿಯಲ್ಲಿ ಇಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಇದರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ಸೇರಿದಂತೆ ಹಲವು ನೇತಾರರು ಭಾಗವಹಿಸುವರು. ಅದರಲ್ಲಿ ಭಾಗವಹಿಸಲು ಬಿಜೆಪಿ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್ ಮತ್ತು ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ. ಸುಭಾಷ್ ಈಗಾಗಲೇ ದಿಲ್ಲಿಗೆ ತೆರಳಿದ್ದಾರೆ. ಬಿಜೆಪಿ ಉಮೇದ್ವಾರರ ಮೊದಲ ಯಾದಿಯನ್ನು ಪಕ್ಷದ ಕೇಂದ್ರ ಸಮಿತಿ ಇಂದೇ ಪ್ರಕಟಿಸುವ ಸಾಧ್ಯತೆ ಇದೆ.