ವಯನಾಡಿನಲ್ಲಿ ಪ್ರತ್ಯಕ್ಷಗೊಂಡ ಮಾವೋವಾದಿಗಳು: ಚುನಾವಣೆ ಬಹಿಷ್ಕಾರಕ್ಕೆ ಕರೆ
ಕಲ್ಪೆಟ್ಟಾ: ಇಡೀ ದೇಶದ ಅತ್ಯಂತ ಕುತೂಹಲ ಕೆರಳಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸ್ಪರ್ಧಿ ಸುವ ವಯನಾಡು ಲೋಕಸಭಾ ಕ್ಷೇತ್ರದಲ್ಲಿ ನಿನ್ನೆ ದಿಢೀರಾಗಿ ಮಾವೋವಾದಿಗಳು ಪ್ರತ್ಯಕ್ಷಗೊಂ ಡಿದ್ದಾರೆ. ಮಾತ್ರವಲ್ಲ ಈ ಕ್ಷೇತ್ರದಲ್ಲಿ ಚುನಾವಣೆ ಬಹಿಷ್ಕರಿಸುವಂತೆ ಅವರು ಕರೆನೀಡಿದ್ದಾರೆ.
ನಿನ್ನೆ ಬೆಳಿಗ್ಗೆ ಶಸ್ತ್ರ ಸಹಿತರಾಗಿ ಬಂದಿದ್ದ ನಾಲ್ವರು ಮಾವೋವಾದಿಗಳು ತಳಪುಳ ಪೊಲೀಸ್ ಠಾಣೆಯ ವ್ಯಾಪ್ತಿಗೊಳಪಟ್ಟ ಕಂಬಮಾಲ ಪ್ರದೇಶದಲ್ಲಿ ಸ್ಥಳೀಯ ರನ್ನು ಭೇಟಿಯಾಗಿ ಚುನಾವಣೆ ಬಹಿಷ್ಕರಿಸುವಂತೆ ಒತ್ತಾಯಿಸಿ ದ್ದರೆನ್ನಲಾಗಿದೆ.
ಮಾವೋವಾದಿ ನೇತಾರ ಸಿ.ಪಿ. ಮೊಯ್ದೀನ್ ನೇತೃತ್ವದ ತಂಡ ಇಲ್ಲಿಗೆ ಆಗಮಿಸಿ ಈ ಕರೆ ನೀಡಿದ್ದಾನೆಂದು ಹೇಳಲಾಗುತ್ತಿದೆ. ಚುನಾವಣೆಯಲ್ಲಿ ಮತದಾನ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಆದ್ದರಿಂದ ಅದನ್ನು ಬಹಿಷ್ಕರಿಸಿ ಎಂದು ಮೊಯ್ದೀನ್ ಸ್ಥಳೀಯರಿಗೆ ಹೇಳಿದ್ದಾನೆಂದೂ ಆಗ ಆ ವಿಷಯದಲ್ಲಿ ಆತ ನಮ್ಮೊಂದಿಗೆ ವಾಗ್ವಾದವನ್ನು ನಡೆಸಿ ಬಳಿಕ ಕಾಡಿನತ್ತ ತೆರಳಿದ್ದನೆಂದು ಸ್ಥಳೀಯರು ಹೇಳಿದ್ದಾರೆ. ರಾಜ್ಯದಲ್ಲಿ ನಾಳೆ ಲೋಕಸಭಾ ಚುನಾವಣೆ ನಡೆಯಲಿರುವ ವೇಳೆಯಲ್ಲಿ ಮಾವೋವಾದಿಗಳು ಪ್ರತ್ಯಕ್ಷಗೊಂಡಿದ್ದು, ಇದನ್ನು ಪೊಲೀಸರು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದಾರೆ. ಮಾವೋವಾದಿಗಳ ಪತ್ತೆಗಾಗಿರುವ ಕಾರ್ಯಾಚರಣೆಯನ್ನು ಪೊಲೀಸರು ಇನ್ನೊಂದೆಡೆ ತೀವ್ರಗೊಳಿಸಿದ್ದಾರೆ.