ಶಬರಿಮಲೆ ತೀರ್ಥಾಟನೆಗೆ ಇಂದು ಸಂಜೆ ಚಾಲನೆ

ಶಬರಿಮಲೆ: ಶಬರಿಮಲೆ ತೀರ್ಥಾಟನಾ ಋತು ಇಂದು ಸಂಜೆ ಆರಂಭಗೊಳ್ಳಲಿದೆ. ಇಂದು ಸಂಜೆ ೫ ಗಂಟೆಗೆ ಶ್ರೀ ಕ್ಷೇತ್ರದ ಗರ್ಭಗುಡಿಯ ಬಾಗಿಲನ್ನು ತೆರೆಯಲಾಗುವುದು.  ತಂತ್ರಿವರ್ಯರಾದ ಕಂಠರರ್ ರಾಜೀವರ್ ಮತ್ತು ಕಂಠರರ್ ಬ್ರಹ್ಮದತ್ತನ್‌ರ ಸಾನಿಧ್ಯದಲ್ಲಿ ಈಗಿನ ಪ್ರಧಾನ ಅರ್ಚಕರಾದ ಪಿ.ಎನ್. ಮಹೇಶ್ ಗರ್ಭಗುಡಿಯ ಬಾಗಿಲು ತೆರೆದು ದೀಪ ಬೆಳಗಿಸುವರು. ನಂತರ ಮಾಳಿಗಪುರ ಕ್ಷೇತ್ರದ ಪ್ರಧಾನ ಅರ್ಚಕರಾದ  ಪಿ.ಎನ್. ಮುರಳಿ ತೆರೆದು ದೀಪ ಬೆಳಗಿಸುವರು. ಆ ಬಳಿಕ ಹದಿನೆಂಟನೇ ಮೆಟ್ಟಿಲು ಏರಿ ಭಕ್ತರಿಗೆ ಶಬರಿನಾಥನ ದರ್ಶನಕ್ಕೆ ಅವಕಾಶ ನೀಡಲಾಗುವುದು.

 ಹೊಸದಾಗಿ ಆರಿಸಲ್ಪಟ್ಟ ಕೊಲ್ಲಂ ಶಕ್ತಿಕುಳಂಗರ ಕುಣಿಮೇಲ್‌ಚೇರಿ ತೋಟತ್ತಿಲ್ ಮಠಂ ಎನ್. ಅರುಣ್ ಕುಮಾರ್ ನಂಬೂದಿರಿ (51) ಶಬರಿಮಲೆಯ ಪ್ರಧಾನ ಅರ್ಚಕರಾಗಿ ಬಳಿಕ ಆ ಸ್ಥಾನ ವಹಿಸಿಕೊಳ್ಳುವರು. ಇದೇ ಸಂದರ್ಭದಲ್ಲಿ  ಮಾಳಿಗಪುರಂ ಕ್ಷೇತ್ರದ ಪ್ರಧಾನ ಅರ್ಚಕರಾಗಿ ಆಯ್ಕೆಗೊಂಡ ಕಲ್ಲಿಕೋಟೆ ಒಳವಣ್ಣ ತಿರುಮಂಗಲತ್ತು ಇಲ್ಲತ್ತ್ ವಾಸುದೇ ವನ್ ನಂಬೂದಿರಿ (54)ರವರು ಇದೇ ಸಂದರ್ಭದಲ್ಲಿ ಸ್ಥಾನ ವಹಿಸಿಕೊಳ್ಳುವರು. ಬಳಿಕ  ಕ್ಷೇತ್ರ ತಂತ್ರಿವರ್ಯರಾದ ಕಂಠರರ್ ರಾಜೀವನ್ ಮತ್ತು ಕಂಠರರ್ ಬ್ರಹ್ಮದತ್ತನ್‌ರ ಕಾರ್ಮಿಕತ್ವದಲ್ಲಿ  ಕಲಶವನ್ನು ಪೂಜಿಸಿ ಅಭಿಷೇಕ ನಡೆಸಲಾಗುವುದು.  ನ. 16ರಿಂದ ಡಿಸೆಂಬರ್ 26ರ ತನಕ ಎಲ್ಲಾ ದಿನಗಳಲ್ಲಿ ವಿಶೇಷ ಪೂಜೆ  ನಡೆಯಲಿದೆ. ತುಪ್ಪದ ಅಭಿಷೇಕ, ಕಳಬಾಭಿಷೇಕ,  ಹೂವಿನ ಅಭಿಷೇಕ ಇತ್ಯಾದಿ ಹರಕೆಗಳಿಗೂ ಅವಕಾಶ ನೀಡಲಾಗುವುದೆಂದು ಮುಜರಾಯಿ ಮಂಡಳಿ ತಿಳಿಸಿದೆ.

ಮಂಡಲಪೂಜೆ ಡಿ. 26, ಮಕರಜ್ಯೋತಿ ಜ.14ರಂದು

ಶಬರಿಮಲೆ: ಶಬರಿಮಲೆಯಲ್ಲಿ ಮಂಡಲಪೂಜೆ ಡಿಸೆಂಬರ್ 26ರಂದು ಹಾಗೂ ಮಕರಜ್ಯೋತಿ ಜನವರಿ 14ರಂದು ನಡೆಯಲಿದೆ. ಶ್ರೀ ಅಯ್ಯಪ್ಪ ದೇವರ ವಿಗ್ರಹಕ್ಕೆ ಚಿನ್ನದಂಗಿ ಧರಿಸಿ ಡಿಸೆಂಬರ್ 26ರಂದು ಸಂಜೆ 6.30ಕ್ಕೆ ಮಂಡಲಪೂಜೆ ನಡೆಯಲಿದೆ. ಅಂದು ರಾತ್ರಿ 11 ಗಂಟೆಗೆ ಶ್ರೀ ಕ್ಷೇತ್ರದ ಗರ್ಭಗುಡಿ ಬಾಗಿಲು ಮುಚ್ಚಲಾಗುವುದು.  ಅನಂತರ ಮಕರಜ್ಯೋತಿ ತೀರ್ಥಾಟ ನೆಗಾಗಿ ಡಿಸೆಂಬರ್ 30ರಂದು ಸಂಜೆ 5 ಗಂಟೆಗೆ ಗರ್ಭಗಡಿ ಬಾಗಿಲನ್ನು ತೆರೆಯಲಾಗುವುದು.  ಲಕ್ಷಾಂತರ ಭಕ್ತರು ಭಾರೀ ಕಾತರದಿಂದ ಕಾಯುತ್ತಿರುವ ಮಕರಜ್ಯೋತಿ ಪೂಜೆ ಜನವರಿ 14ರಂದು ನಡೆಯಲಿದೆ. ಜನವರಿ 20ರಂದು ಶ್ರೀ ಕ್ಷೇತ್ರದ ಗರ್ಭಗುಡಿ ಬಾಗಿಲು ಮುಚ್ಚಿದ ಬಳಿಕ ಈ ಬಾರಿಯ ತೀರ್ಥಾಟನಾ ಋತು ಮುಕ್ತಾಯಗೊಳ್ಳಲಿದೆ.

Leave a Reply

Your email address will not be published. Required fields are marked *

You cannot copy content of this page