ಸಿಪಿಎಂನ ಮಮತೆ ಶತ್ರು ರಾಷ್ಟ್ರಗಳೊಂದಿಗೆ- ಕೆ. ಸುರೇಂದ್ರನ್

ಕಾಸರಗೋಡು: ಕಮ್ಯೂನಿಸ್ಟ್ ಮಾರ್ಕಿಸ್ಟ್ ಪಕ್ಷಗಳು ಎಂದೂ ಮಮತೆ ಹೊಂದಿರುವುದು ಶತ್ರು ರಾಷ್ಟ್ರಗಳೊಂದಿಗೆ ಮಾತ್ರವಾಗಿದೆ ಎಂದೂ ಅಂತಹ ದೇಶಗಳನ್ನು ಬೆಂಬಲಿಸುವ ನಿಲುವನ್ನು ಆ ಪಕ್ಷಗಳು ಸದಾ ಅನುಸರಿಸುತ್ತಾ ಬಂದಿದೆ ಎಂದು ಬಿಜೆಪಿ  ಮಾಜಿ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್ ಆರೋಪಿಸಿದ್ದಾರೆ.

ಭಾರತದಲ್ಲಿ ನೆಲೆಸಿರುವ ಪಾಕಿಸ್ತಾನಿ ಗಳನ್ನು ಇಲ್ಲಿಂದ ಹೊರದಬ್ಬಬೇಕೆಂಬ  ಬೇಡಿಕೆ ಮುಂದಿರಿಸಿ ಬಿಜೆಪಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕಾಸರಗೋಡಿನಲ್ಲಿ ನಿನ್ನೆ ನಡೆದ ಧರಣಿ ಮುಷ್ಕರವನ್ನು ಉದ್ಘಾಟಿಸಿ ಸುರೇಂದ್ರನ್ ಮಾತನಾಡು ತ್ತಿದ್ದರು. ಪಾಕಿಸ್ತಾನಕ್ಕೆ ಸಹಾಯ ಒದಗಿಸುತ್ತಿರುವ ಚೈನಾದೊಂದಿಗೆ ಸಿಪಿಎಂ ಕಟಿಬದ್ದತೆ ಹೊಂದಿದೆ. ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಒದಗಿಸುವ ನಿಲುವನ್ನು ಕೇರಳ ಸರಕಾರ ಹೊಂದಿದೆ. ಕೇರಳದಲ್ಲಿರುವ ೧೫೦ಕ್ಕೂ ಹೆಚ್ಚು ಪಾಕಿಸ್ತಾನಿಗಳಲ್ಲಿ  145  ಮಂದಿ ಎಪ್ರಿಲ್ 29ರೊಳಗಾಗಿ ದೇಶ ಬಿಡಬೇಕೆಂಬ ಕಠಿಣ ನಿರ್ದೇಶವನ್ನು ಕೇಂದ್ರ ಗೃಹ ಸಚಿವಾಲಯ ನೀಡಿದ್ದರೂ, ಆ ನಿರ್ದೇಶವನ್ನು ಪಾಲಿಸುವ ವಿಷಯದಲ್ಲಿ ಕೇರಳ ಸರಕಾರ ತೀವ್ರ ನಿರ್ಲಕ್ಷ್ಯ ನೀತಿ ತಾಳಿದೆ. ಕೇವಲ ನಾಮಮಾತ್ರವಾದ ಪಾಕಿಸ್ತಾನಿ ಪ್ರಜೆಗಳು ಮಾತ್ರವೇ ಕೇರಳ ಬಿಟ್ಟಿದ್ದಾರೆಂದು ಸುರೇಂದ್ರನ್ ಹೇಳಿದ್ದಾರೆ. ಇತರ ಯಾವುದೇ ರಾಜ್ಯದಲ್ಲೂ ಇಲ್ಲದ ರೀತಿಯಲ್ಲಿ ಪಾಕಿಸ್ತಾನಿ ರಸ್ತೆ, ಪಾಕಿಸ್ತಾನಿ ಮುಕ್, ಪಾಕಿಸ್ತಾನಿ ತಿರುವು ಎಂಬ ಹೆಸರುಗಳು ಕೇರಳದಲ್ಲಿವೆ. ಅಂತಹ ಹೆಸರುಗಳನ್ನು ತೆರವುಗೊಳಿಸದೆ ಪಾಕಿಸ್ತಾನಿ ಬೆಂಬಲಿಗಳನ್ನು ಓಲೈಸುವ ನಿಲುವನ್ನು ಸಿಪಿಎಂ ಮತ್ತು ರಾಜ್ಯ ಸರಕಾರ ಹೊಂದಿದೆ. ಉಗ್ರಗಾಮಿ ಶಕ್ತಿಗಳ ವಿರುದ್ಧ ರಾಜ್ಯ ಸರಕಾರ ಸೂಕ್ತ ಕ್ರಮ ಕೈಗೊಳ್ಳದೆ ಅಂತಹ ಶಕ್ತಿಗಳಿಗೆ ಇಲ್ಲಿ ಸ್ವತಂತ್ರವಾಗಿ ಕಾರ್ಯವೆಸಗಲು ಒತ್ತಾಸೆ ಗೈಯ್ಯುತ್ತಿದೆ ಎಂದು ಸುರೇಂದ್ರನ್ ಆರೋಪಿಸಿದ್ದು, ಈ ವಿಷಯದಲ್ಲಿ ಸಿಪಿಎಂ ವೋಟ್ ಬ್ಯಾಂಕ್ ರಾಜಕೀಯ ನೀತಿ ಅನುಸರಿಸುತ್ತಿದೆ ಎಂದೂ ಹೇಳಿದರು. ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಬಿಜೆಪಿ ನೇತಾರರಾದ ನ್ಯಾಯವಾದಿ ಕೆ. ಶ್ರೀಕಾಂತ್, ವಿ. ರವೀಂದ್ರನ್, ನ್ಯಾ. ವಿ. ಬಾಲಕೃಷ್ಣ ಶೆಟ್ಟಿ, ರವೀಶ ತಂತ್ರಿ ಕುಂಟಾರು, ಸತೀಶ್ಚಂದ್ರ ಭಂಡಾರಿ, ಪಿ.ಆರ್.  ಸುನಿಲ್, ಕೆ.ಕೆ. ನಾರಾಯಣನ್, ಎಂ. ಬಲ್‌ರಾಜ್, ಮುರಳೀಧರ ಯಾದವ್, ಎಂ. ಜನನಿ, ಮಣಿಕಂಠ ರೈ, ಸವಿತಾ ಟೀಚರ್, ಎ.ಕೆ. ಕಯ್ಯಾರ್, ಎಚ್.ಆರ್. ಸುಕನ್ಯಾ, ಪ್ರಮೀಳಾ ಮಜಲ್, ಅರುಣ ಶೆಟ್ಟಿ, ಸಂಜೀವ ಪುಳ್ಕೂರ್, ಕೆ.ಎಂ. ಅಶ್ವಿನಿ, ಪುಷ್ಪ ಗೋಪಾಲ ಮೊದಲಾದವರು ಭಾಗವಹಿಸಿದರು. ಮನುಲಾಲ್  ಮೇಲತ್ತ್ ಸ್ವಾಗತಿಸಿ, ಎನ್. ಬಾಬುರಾಜ್ ವಂದಿಸಿದರು.

You cannot copy contents of this page