ಹದಿನೆಂಟು ಮೆಟ್ಟಿಲಿನಲ್ಲಿ ನಿಂತು ಫೊಟೋ ಶೂಟ್: ಶಬರಿಮಲೆಯಲ್ಲಿ ಪೊಲೀಸರಿಂದಲೇ ಆಚಾರ ಉಲ್ಲಂಘನೆ
ಶಬರಿಮಲೆ: ಶಬರಿಮಲೆ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ಕರ್ತವ್ಯಕ್ಕೆ ನೇಮಿಸಲಾದ ಪೊಲೀಸರೇ ಆಚಾರ ಉಲ್ಲಂಘನೆ ನಡೆಸಿದ್ದಾರೆ. ಅತೀ ಪವಿತ್ರತೆ ಪಾಲಿಸುವ ಹದಿನೆಂಟು ಮೆಟ್ಟಿಲಿನಲ್ಲಿ ದೇವರಿಗೆ ಬೆನ್ನು ಹಾಕಿ ನಿಂತು ಪೊಲೀಸರ ತಂಡ ಫೊಟೋ ತೆಗೆಸಿಕೊಂಡಿದ್ದಾರೆ. ಕಳೆದ ಸೋಮವಾರ ಬೆಳಿಗ್ಗೆ ಕರ್ತವ್ಯ ಮುಗಿಸಿ ಮರಳುವ ಮೊದಲ ಬ್ಯಾಚ್‌ನಲ್ಲಿ ಒಳಗೊಂಡ ಮೂವತ್ತರಷ್ಟು ಪೊಲೀರು ಈ ರೀತಿ ಆಚಾರ ಉಲ್ಲಂಘನೆ ನಡೆಸಿ ವಿವಾದಕ್ಕೀಡಾಗಿದ್ದಾರೆ.
ಕಳೆದ ಶನಿವಾರ ಮಧ್ಯಾಹ್ನ ವೇಳೆ ವಿವಾದಕ್ಕೆಡೆಯಾದ ಘಟನೆ ನಡೆದಿದೆ. ಅಂದು ಮಧ್ಯಾಹ್ನ ಗರ್ಭಗುಡಿಯ ಬಾಗಿಲು ಮುಚ್ಚಿದ ಬಳಿಕ ಹದಿನೆಂಟು ಮೆಟ್ಟಿಲಿನಲ್ಲಿ ಕೆಳಗಿನಿಂದ ಮೇಲಿನವರೆಗೆ ದೇವರತ್ತ ಬೆನ್ನು ಹಾಕಿ ನಿಂತು ಫೊಟೋ ತೆಗೆದುಕೊಂಡಿದ್ದಾರೆ. ಕೆಲವರು ಬದಿಯಲ್ಲಿ ಕುಳಿತುಕೊಂಡಿರುವುದು ಕೂಡಾ ಫೋಟೋದಲ್ಲಿ ಕಂಡು ಬರುತ್ತಿದೆ. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದೆ. ಸೇವೆ ಪೂರ್ತಿಗೊಳಿಸಿ ಮರಳುವ ಮುಖ್ಯ ಅರ್ಚಕರು ಕೂಡಾ ದೇವರತ್ತ ಬೆನ್ನು ಹಾಕಿ ಮೆಟ್ಟಿಲು ಇಳಿಯುವಂತಿಲ್ಲ. ಅದೇ ರೀತಿ ಹದಿನೆಂಟು ಮೆಟ್ಟಿಲಿನಲ್ಲಿ ಕರ್ತವ್ಯಕ್ಕೆ ನೇಮಿಸ ಲಾಗುವ ಪೊಲೀಸರು ದೇವರತ್ತ ಬೆನ್ನು ಹಾಕಿ ನಿಲ್ಲುವಂತಿಲ್ಲ. ಹಾಗಿರುವಾಗ ಇದೀಗ ಪೊಲೀಸರು ನಡೆಸಿದ ಆಚಾರ ಉಲ್ಲಂಘನೆ ವಿರುದ್ಧ ವ್ಯಾಪಕ ಪ್ರತಿಭಟನೆ ಕೇಳಿ ಬಂದಿದೆ.
ಇದೇ ವೇಳೆ ಈ ಘಟನೆ ಅರಿವಿಗೆ ಬಂದ ಹಿನ್ನೆಲೆಯಲ್ಲಿ ಎಡಿಜಿಪಿ ಎಸ್ ಶ್ರೀಜಿತ್, ಸ್ಪೆಶಲ್ ಆಫೀಸರ್ ಕೆ.ಇ. ಬೈಜು ಅವರೊಂದಿಗೆ ವರದಿ ಕೇಳಿದ್ದಾರೆ. ಅಲ್ಲದೆ ವಿವಾದಕ್ಕೆಡೆಯಾದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಇದರಂತೆ ಎಸ್‌ಎಪಿ ಕ್ಯಾಂಪ್‌ನ ೨೩ ಪೊಲೀಸರಿಗೆ ಕಣ್ಣೂರು ಕೆಎಪಿ-೪ ಕ್ಯಾಂಪ್‌ನಲ್ಲಿ ಉತ್ತಮ ನಡತೆ ತರಬೇತಿಗೆ ಎಡಿಜಿಪಿ ಎಸ್. ಶ್ರೀಜಿತ್ ನಿರ್ದೇಶ ನೀಡಿದ್ದಾರೆ.