ಮಂಜೇಶ್ವರ: ಪ್ರಸಿದ್ಧವಾದ ಉದ್ಯಾವರ ಶ್ರೀ ಅರಸು ಮಂಜೀಷ್ಣಾರ್ ಅಣ್ಣ ತಮ್ಮ ದೈವಗಳ ಕ್ಷೇತ್ರ ಜಾತ್ರೆಯ ಪೂರ್ವಭಾವಿ ಯಾಗಿ ಉದ್ಯಾವರ ಸಾವಿರ ಜಮಾಯತ್ ಮಸೀದಿಗೆ ದೈವಗಳ ಭೇಟಿ ನಿನ್ನೆ ಸಾಂಪ್ರದಾಯಿಕ ರೀತಿಯಲ್ಲಿ ಜರಗಿತು. ಹಿಂದೂ-ಮುಸ್ಲಿಂ ಭಾವೈಕ್ಯದ ಸಂಕೇತದೊಂ ದಿಗೆ ಕಳೆದ 800 ವರ್ಷಗಳಿಂದ ಆಚರಿಸುತ್ತಿರುವ ಉದ್ಯಾವರ ಶ್ರೀ ಅರಸು ದೈವಗಳ ಪಾತ್ರಿಗಳು ಮತ್ತು ದೇವಸ್ಥಾನದ ಪ್ರತಿನಿಧಿಗಳು ನಿನ್ನೆ ಸಾವಿರ ಜಮಾಯತ್‌ಗೆ ಭೇಟಿ ನೀಡಿದಾಗ ಮುಸ್ಲಿಂ ಬಾಂಧವರು ಹೃತ್ಪೂರ್ವಕ ಸ್ವಾಗತ ನೀಡಿದರು.
ಮೇಷ ಸಂಕ್ರಮಣ ಕಳೆದು ಬರುವ ಮೊದಲ ಶುಕ್ರವಾರ ಪರಂಪರೆಯಂತೆ ಈ ಭೇಟಿ ನಡೆಯುತ್ತದೆ. ಮಧ್ಯಾಹ್ನ ಉದ್ಯಾವರ ಕ್ಷೇತ್ರದ ಭಂಡಾರ ಮನೆಯಿಂದ ಹೊರಟ ದೈವ ಪಾತ್ರಿಗಳು 1.30ರ ಹೊತ್ತಿಗೆ ಜಮಾಯತ್‌ಗೆ ತಲುಪಿದರು. ಈ ವೇಳೆ ಜುಮಾ ನಮಸ್ಕಾರ ಮುಗಿಸಿ ನಿಂತಿದ್ದ ಮಸೀದಿಯ ಆಡಳಿತ ಸಮಿತಿ ಅಧ್ಯಕ್ಷರು, ಕಾರ್ಯದರ್ಶಿಗಳು ಸಹಿತ ಮುಸ್ಲಿಂ ಬಾಂಧವರು ದೈವ ಪಾತ್ರಿಗಳನ್ನು ಸ್ವಾಗತಿಸಿದರು. ಮೇ ೮ರಂದು ಧ್ವಜಾರೋಹಣಗೊಂಡು ಉದ್ಯಾವರ ಶ್ರೀ ಅರಸು ಮಂಜೀಷ್ಣಾರ್ ದೈವಗಳ ಐತಿಹಾಸಿಕ ಬಂಡಿ ಉತ್ಸವ ನಡೆಯಲಿದೆ.