ಕೇರಳ ಲೋಕೋಪಯೋಗಿ ಇಲಾಖೆ ಸಚಿವರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪರಿಶೀಲನೆ ಹಾಸ್ಯಾಸ್ಪದ- ಬಿಜೆಪಿ

ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿ ತಲಪಾಡಿ-ಚೆಂಗಳ ರೀಚ್‌ನ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಉದ್ಘಾಟನೆಗೆ ಕ್ಷಣಗಣನೆ ಆರಂಭಗೊಂಡಿರುವಂತೆ ಹೆದ್ದಾರಿ ಕಾಮಗಾರಿ ಪರಿಶೀಲನೆ ನೆಪದಲ್ಲಿ ರಾಜ್ಯದ ಲೋಕೋಪಯೋಗಿ ಸಚಿವ ಮೊಹಮ್ಮದ್ ರಿಯಾಸ್ ಕಾಮಗಾರಿ ಪರಿಶೀಲಿಸಹೊರಟಿರುವುದು ಹಾಸ್ಯಾಸ್ಪದ ಎಂದು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಅಧ್ಯಕ್ಷ ಆದರ್ಶ್ ಬಿ.ಎಂ. ನುಡಿದಿದ್ದಾರೆ. ಹೆದ್ದಾರಿ ಸಂಪೂರ್ಣವಾಗಿ ಕೇಂದ್ರ ಸರಕಾರದ ಯೋಜನೆಯಾಗಿದ್ದು, ಇದನ್ನು ರಾಜ್ಯ ಸರಕಾರದ ಯೋಜನೆ ಎಂಬಂತೆ ಬಿಂಬಿಸಹೊರಟಿರುವುದು ಅಲ್ಪತನದ ಪರಮಾವಧಿ ಎಂದು ಅವರು ಆಕ್ಷೇಪಿಸಿದ್ದಾರೆ. ಸಚಿವ ರಿಯಾಸ್ ಸಾಧ್ಯವಾದರೆ ಹೊಸಂಗಡಿಯಿಂದ ಆನೆಕಲ್ಲು ತನಕದ ತಮ್ಮ ಇಲಾಖೆ ಅಡಿಯಲ್ಲಿ ಬರುವ ರಸ್ತೆಯಲ್ಲಿ ಸಂಚರಿಸಿ ಅದರ ಅವಸ್ಥೆಯನ್ನು ಪರಿಶೀಲಿಸಲಿ ಎಂದು ಆದರ್ಶ್ ಆಗ್ರಹಿಸಿದರು. ಕೇಂದ್ರ ಸರಕಾರದ ಹೆದ್ದಾರಿ ನಿರ್ಮಾಣ ವೇಳೆ ಜನ ಇರುವಲ್ಲಿ ರಸ್ತೆಗಿಳಿದು ಮಾಡುವ ನಾಟಕ ಜನರಿಗೆ ತಿಳಿದಿದೆ ಎಂದು ಅವರು ಲೇವಡಿ ಮಾಡಿದರು. ರಾಜ್ಯದ ಸಚಿವರು, ಸರಕಾರ ಇಂತಹ ಹಾಸ್ಯಾಸ್ಪದ ಕಾರ್ಯಗಳಿಗೆ ಮುಂದಾಗದೆ ಬಾಕಿ ಇರುವ ಪಿಂಚಣಿ, ಲೈಫ್ ಯೋಜನೆ, ಸರಕಾರಿ ನೇಮಕಾತಿ, ಆಶಾ ಕಾರ್ಯಕರ್ತೆಯರ ಸಮಸ್ಯೆ, ಪಂಚಾಯತ್‌ಗಳಲ್ಲಿ ಖಾಲಿಯಿರುವ ಅಧಿಕಾರಿಗಳ ನೇಮಕಕ್ಕೆ ಗಮನ ನೀಡಲಿ ಎಂದು ಬಿಜೆಪಿ ತಿಳಿಸಿದೆ.

RELATED NEWS

You cannot copy contents of this page