ಕಾಸರಗೋಡು: ಶೌಚಾಲಯದ ತ್ಯಾಜ್ಯವನ್ನು ಸಾರ್ವಜನಿಕ ಸ್ಥಳದಲ್ಲಿ ಉಪೇಕ್ಷಿಸಲು ತಲುಪಿದ ವಾಹನಕ್ಕೆ ನಾಗರಿಕರು ತಡೆಯೊಡ್ಡಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಅನಂತರದ ಕ್ರಮದಂತೆ ಪಂಚಾಯತ್ ಅಧಿಕಾರಿ ಗಳು ವಾಹನದ ಮಾಲಕನಿಗೆ 25 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ನಿನ್ನೆ ಮುಂಜಾನೆ 1 ಗಂಟೆ ವೇಳೆ ಮೊಗ್ರಾಲ್ ಪುತ್ತೂರು ಪಂಚಾಯತ್ ವ್ಯಾಪ್ತಿಯ ಮೊಗ್ರಾಲ್ ಪುತ್ತೂರು ಆಜಾದ್‌ನಗರದಲ್ಲಿ ಶೌಚಾಲಯದ ತ್ಯಾಜ್ಯ ಉಪೇಕ್ಷಿಸಲು ಯತ್ನ ನಡೆದಿದೆ. ಈ ಭಾಗದಲ್ಲಿ ತ್ಯಾಜ್ಯವನ್ನು ಎಸೆಯುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ನಾಗರಿಕರು ಜಾಗ್ರತೆ ಪಾಲಿಸುತ್ತಿದ್ದರು. ಇದೇ ವೇಳೆ ನಿನ್ನೆ ಮುಂಜಾನೆ ಟ್ಯಾಂಕರ್ ಲಾರಿಯೊಂ ದು ಅಲ್ಲಿಗೆ ತಲುಪಿ ಶೌಚಾಲಯ ತ್ಯಾಜ್ಯವನ್ನು ಉಪೇಕ್ಷಿಸಲು ತೊಡಗಿತ್ತು. ಕೂಡಲೇ ಅಲ್ಲಿಗೆ ತಲುಪಿದ ನಾಗರಿಕರು ವಾಹನಕ್ಕೆ ತಡೆಯೊಡ್ಡಿ ಕಾಸರಗೋಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಸ್ಥಳಕ್ಕೆ ತಲುಪಿದ ಪೊಲೀಸರು ವಾಹನವನ್ನು ಕಸ್ಟಡಿಗೆ ತೆಗೆದುಕೊಂಡಿ ದ್ದಾರೆ. ಬಳಿಕ ಪೊಲೀಸರು ನೀಡಿದ ಮಾಹಿತಿಯಂತೆ ಮೊಗ್ರಾಲ್ ಪುತ್ತೂ ರು ಪಂಚಾಯತ್ ಅಧಿಕಾರಿಗಳು ಟ್ಯಾಂಕರ್ ಲಾರಿಯ ಆರ್‌ಸಿ ಮಾಲಕನಿಗೆ ೨೫ ಸಾವಿರ ರೂ. ದಂಡ ಹೇರಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಉಪೇಕ್ಷಿಸುವುದು ಗಮನಕ್ಕೆ ಬಂದಲ್ಲಿ ಕೂಡಲೇ ಪಂಚಾಯತ್‌ನ ಗಮನಕ್ಕೆ ತರಬೇಕೆಂದು ಅಧಿಕಾರಿಗಳು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.






