ಕಾಸರಗೋಡಿಗೆ 40 ವರ್ಷ: ಜಿಲ್ಲಾಧಿಕಾರಿಯಿಂದ ಗಿಡ ನೆಟ್ಟು ಜಿಲ್ಲಾ ಮಟ್ಟದ ಉದ್ಘಾಟನೆ
ಕಾಸರಗೋಡು: ಎಲ್ಲಾ ಇಲಾಖೆಗಳ ವಿವಿಧ ಕ್ಷೇಮ, ಸೇವಾ ಚಟುವಟಿಕೆಗಳು ಜನಸಾಮಾನ್ಯರಿಗೆ ಸರಿಯಾಗಿ ಲಭ್ಯಗೊಳಿಸಬೇಕಾಗಿರುವುದು ಅನಿವಾರ್ಯವಾಗಿದೆ ಎಂದೂ ಅದಕ್ಕಾಗಿ ಎಲ್ಲಾ ನೌಕರರು ಪ್ರಯತ್ನಿಸಬೇಕೆಂದು ಜಿಲ್ಲಾಧಿಕಾರಿ ಕೆ. ಇಂಬಶೇಖರ್ ನುಡಿದರು. ಕಾಸರಗೋಡು ಜಿಲ್ಲೆಯ 40ನೇ ವಾರ್ಷಿಕಾಚರಣೆಯ ಜಿಲ್ಲಾ ಮಟ್ಟದ ಉದ್ಘಾಟನೆ ಕಲೆಕ್ಟರೇಟ್ ಕಾನ್ಫರೆನ್ಸ್ ಸಭಾಂಗಣದಲ್ಲಿ ನಿರ್ವಹಿಸಿ ಅವರು ಮಾತನಾಡುತ್ತಿದ್ದರು. ಜಿಲ್ಲೆ ರೂಪೀಕರಿಸಿ 40 ವರ್ಷ ದಾಟಿದರೂ ಕಾಸರಗೋಡು ಜಿಲ್ಲೆಯವರು ಸರಕಾರಿ ಉದ್ಯೋಗಿಗಳಾಗಿರುವುದು ಕಡಿಮೆ ಎಂದವರು ನುಡಿದರು. ಇದೇ ರೀತಿ ಹಲವಾರು ಸಮಸ್ಯೆಗಳಿಗೆ ಇನ್ನೂ ಪರಿಹಾರ ಕಾಣಬೇಕಾಗಿದೆ.
ಸಹಾಯಕ ಜಿಲ್ಲಾಧಿಕಾರಿ ಸೂಫಿಯಾನ್ ಅಹಮ್ಮದ್, ಎ. ಶಜ್ನ, ಎಂ. ಮಧುಸೂದನನ್, ಪಿ. ಅಖಿಲ್, ಎ.ಪಿ. ದಿಲ್ನ ಮಾತನಾಡಿದರು. ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು 40 ಗಿಡಗಳನ್ನು ನೆಟ್ಟು ಜಿಲ್ಲೆಯ ೪೦ನೇ ಹುಟ್ಟು ಹಬ್ಬವನ್ನು ಆಚರಿಸಿದರು.
ಇದೇ ವೇಳೆ ನಾಡು ಕಾಡಾಗಬೇಕಾದ ಕಾಲವಾಗಿದೆ ಇದು ಎಂದು ಶಿಲ್ಪಿ ಕಾನಾಯಿ ಕುಂಞಿರಾಮನ್ ನುಡಿದರು. ಜಿಲ್ಲಾ ಪಂಚಾಯತ್ ಕಚೇರಿ ಬಳಿ ಕಾಸರಕದ ಮರವನ್ನು ನೆಟ್ಟು ಅವರು ಮಾತನಾಡುತ್ತಿದ್ದರು. ಪ್ರಕೃತಿ ಶೋಷಣೆ ಅಪರಿಮಿತವಾಗುವಾಗ ಅದು ಮನುಷ್ಯರಾಶಿಗೆ ತೊಂದರೆ ಉಂಟುಮಾಡುತ್ತಿದೆ. ಪ್ರಗತಿ ಎಂಬುದು ಅವೈಜ್ಞಾನಿಕವಾಗಿರಬಾರದು. ಕಾಡನ್ನು ಮತ್ತೆ ಹಿಂಪಡೆಯುವುದು ಮಾತ್ರವಾಗಿದೆ ಹವಾಮಾನ ಬದಲಾವಣೆ ಸಹಿತದ ಪ್ರತ್ಯಾಘಾತಗಳಿಗೆ ಪರಿಹಾರವೆಂದು ಕಾನಾಯಿ ನುಡಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದರು.