ಕಾಸರಗೋಡು ಆರ್.ಟಿ. ಕಚೇರಿಗೆ ಮಿಂಚಿನ ವಿಜಿಲೆನ್ಸ್ ದಾಳಿ: ನಗದು ವಶ
ಕಾಸರಗೋಡು: ಕಾಸರಗೋಡು ವಿದ್ಯಾನಗರದ ಸಿವಿಲ್ ಸ್ಟೇಷನ್‌ನಲ್ಲಿ ಕಾರ್ಯವೆಸಗುತ್ತಿರುವ ಕಾಸರಗೋಡು ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ)ಗೆ ಕಾಸರಗೋಡು ವಿಜಿಲೆನ್ಸ್ (ಜಾಗೃತದಳ) ಡಿವೈಎಸ್‌ಪಿ ವಿ.ಕೆ. ವಿಶ್ವಂಭರನ್‌ರ ನೇತೃತ್ವದ ತಂಡ ನಿನ್ನೆ ಮಿಂಚಿನ ದಾಳಿ ನಡೆಸಿದೆ.
ದಾಳಿಯಲ್ಲಿ ಆರ್‌ಟಿ ಕಚೇರಿಯ ಸಿಬ್ಬಂದಿಗಳು ಮತ್ತು ಏಜೆಂಟರುಗಳ ನಡುವಿನ ಅವ್ಯವಹಾರವನ್ನು ಪತ್ತೆಹಚ್ಚಲಾಗಿದೆ. ಆರ್‌ಟಿ ಕಚೇರಿಯ ಕೆಲವು ಸಿಬ್ಬಂದಿಗಳಿಗೆ ಲಂಚ ರೂಪದಲ್ಲಿ ನೀಡಲೆಂದು ತರಲಾಗಿರುವುದಾಗಿ ಸಂಶಯಿಸಲಾಗುತ್ತಿರುವ ೩೪,೪೧೦ ರೂ. ನಗದನ್ನು ಪತ್ತೆಹಚ್ಚಿ ವಶಪಡಿಸಲಾಗಿದೆ. ಇದು ಪ್ರಸ್ತುತ ಕಚೇರಿಯಲ್ಲಿ ನಡೆಯುತ್ತಿರುವ ಲಂಚಗುಳಿತನದ ಒಂದು ಧ್ಯೋತಕವಾಗಿದೆ ಎಂದು ವಿಜಿಲೆನ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕಚೇರಿಯ ದೈನಂದಿನ ಸಮಯ ಕೊನೆಗೊಳ್ಳುವ ಮೊದಲು ಕೆಲವು ಏಜೆಂಟರು ಆರ್‌ಟಿಒ ಕಚೇರಿಗೆ ಆಗಮಿಸುವ ಬಗ್ಗೆ ಗುಪ್ತ ಮಾಹಿತಿ ಲಭಿಸಿತ್ತು. ಅದರ ಆಧಾರದಲ್ಲಿ ಈ ಮಿಂಚಿನ ದಾಳಿ ನಡೆಸಲಾಗಿದೆ. ಆರ್ ಟಿ .ಒ. ಕಚೇರಿಯ ಕೆಲವರಿಗೆ ಪ್ರತೀ ವಾರ ಲಂಚ ನೀಡುವ ಕೆಲವು ಏಜೆಂಟರುಗಳು ಕಾರ್ಯವೆಸಗುತ್ತಿದ್ದಾರೆ. ಹೀಗೆ ಹಣ ನೀಡಲು ಬರುವ ಏಜೆಂಟರುಗಳ ಮೊಬೈಲ್ ನಂಬ್ರಗಳ ಜತೆ ಅವರ ಹೆಸರು ಸೇರಿಸಿ ಅದನ್ನು ಆರ್‌ಟಿ ಕಚೇರಿಯ ಕೆಲವು ಸಿಬ್ಬಂದಿಗಳು ತಮ್ಮ ಮೊಬೈಲ್ ಫೋನ್‌ನಲ್ಲಿ ಸೇವ್ ಮಾಡಿದ್ದರೆಂಬುವುದನ್ನು ಪತ್ತೆಹಚ್ಚಲಾಗಿದೆ ಎಂದು ವಿಜಿಲೆನ್ಸ್ ಡಿವೈಎಸ್‌ಪಿ ತಿಳಿಸಿದ್ದಾರೆ. ವಿಜಿಲೆನ್ಸ್ ಇನ್ಸ್‌ಪೆಕ್ಟರ್ ಕೆ. ಸನು ಮೋನ್, ಎಸ್.ಐ. ವಿ.ಎಂ. ಮಧು ಸೂಧನನ್, ಎಎಸ್‌ಐ ವಿ.ಟಿ. ಸುಭಾಶ್‌ಚಂದ್ರನ್, ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್‌ಗಳಾದ ವಿ. ರಾಜೀವನ್, ಕೆ.ವಿ. ಜಯನ್, ಕೆ.ವಿ. ಸುಧೀರ್, ಕೆ.ಬಿ. ಬಿಜು, ಪ್ರಮೋದ್ ಕುಮಾರ್, ಶೀಬಾ, ಕೃಷ್ಣನ್ ಮತ್ತು ಕಾಸರಗೋಡು ಪ್ಲಾನಿಂಗ್ ಕಚೇರಿಯ ರಿಸರ್ಚ್ ಅಸಿಸ್ಟೆಂಟ್ ಕೆ. ಜಯಚಂದ್ರನ್ ಎಂಬವರು ಈ ದಾಳಿ ನಡೆಸಿದ ತಂಡದಲ್ಲಿದ್ದರು.