ಕಾಸರಗೋಡು ನಗರಸಭೆಯಲ್ಲಿ 37 ಲಕ್ಷ ರೂ.ಗಳ ಅವ್ಯವಹಾರ ವಿಜಿಲೆನ್ಸ್‌ನಿಂದ ಪತ್ತೆ- ಎಂ.ಎಲ್. ಅಶ್ವಿನಿ

ಕಾಸರಗೋಡು: ಕಾಸರಗೋಡು ನಗರಸಭೆಯಲ್ಲಿ ವಿಜಿಲೆನ್ಸ್ 37 ಲಕ್ಷ ರೂ.ಗಳ ಅವ್ಯವಹಾರ ಪತ್ತೆಹಚ್ಚಿರುವುದಾಗಿ ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಆರೋಪಿಸಿದರು. 25 ವರ್ಷದಿಂದ ಆಡಳಿತದಲ್ಲಿರುವ ಮುಸ್ಲಿಂ ಲೀಗ್ ನಗರಸಭೆಯ ತೆರಿಗೆದಾರರ ಹಣವನ್ನು ಅವ್ಯವಹಾರಕ್ಕೆ ಉಪಯೋಗಿಸಲಿರುವ ‘ಮನಿಸೆಂಟರ್’ ಆಗಿ ನಗರಸಭೆಯನ್ನು ಬದಲಿಸಿದೆ ಎಂದು ಅವರು ಆರೋಪಿಸಿದರು. ಅಭಿವೃದ್ಧಿ ರಹಿತ ಭ್ರಷ್ಟಾಚಾರ ಆಡಳಿತವೆಂದು ಆರೋಪಿಸಿ ಬಿಜೆಪಿ ನಗರಸಮಿತಿಯ ನೇತೃತ್ವದಲ್ಲಿ ನಗರಸಭಾ ಕಚೇರಿಗೆ ನಡೆಸಿದ ಮಾರ್ಚ್ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ನಗರದ ಹೆಚ್ಚಿನ ರಸ್ತೆಗಳು ಸಂಚಾರಯೋಗ್ಯವಲ್ಲದಂತಾಗಿದೆ. ಪ್ರವಾಸಿ ವಲಯದಲ್ಲೂ, ನಗರ ಸೌಂದರ್ಯಗೊಳಿಸುವುದಕ್ಕೂ ಕೇಂದ್ರ ಸರಕಾರದಿಂದ ಹಣ ಪಡೆದುಕೊಳ್ಳಲು ಲೀಗ್ ನೇತೃತ್ವದಲ್ಲಿರುವ ಆಡಳಿತ ಸಮಿತಿ ಯತ್ನಿಸಿಲ್ಲ. ತೆರಿಗೆದಾರರ ಲಕ್ಷಾಂತರ ರೂ. ಅವ್ಯವಹಾರ ನಡೆಸಲು ಹಾಗೂ ಯೋಜನೆ ಜ್ಯಾರಿಯಲ್ಲಿ ಮೊತ್ತವನ್ನು ಬದಲಿಯಾಗಿ ಉಪಯೋಗಿಸಲು ಮಾತ್ರವೇ ನಗರಸಭೆ ಆಡಳಿತ ಸಮಿತಿಗೆ ಆಸಕ್ತಿ ಇರುವುದೆಂದು ಅವರು ಆರೋಪಿಸಿದರು. 37 ಲಕ್ಷ ರೂ.ಗಳ ಅವ್ಯವಹಾರ ಕೆಲವೇ ವಾರಗಳ ಹಿಂದೆ ನಡೆದಿರುವುದಾಗಿದ್ದು, ಇನ್ನೂ ಬಹಿರಂಗಗೊಳ್ಳದ ಅದೆಷ್ಟೋ ಅವ್ಯವಹಾರ ನಗರಸಭೆಯಲ್ಲಿ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.

ಜೈವಿಕ ತ್ಯಾಜ್ಯ ಸಂಸ್ಕರಣೆ ಯೋಜನೆ ಸಹಿತ ವಿವಿಧ ಜನಕ್ಷೇಮ- ಅಭಿವೃದ್ಧಿ ಯೋಜನೆಗಳ ಜ್ಯಾರಿಯಲ್ಲೂ ಬೃಹತ್ ಅವ್ಯವಹಾರ, ಭ್ರಷ್ಟಾಚಾರ ನಗರಸಭೆಯಲ್ಲಿ ನಡೆಯುತ್ತಿದೆ ಎಂದು ನಗರಸಭಾ ಕೌನ್ಸಿಲರ್, ಬಿಜೆಪಿ ಮಾಜಿ ಜಿಲ್ಲಾ ಸಮಿತಿ ಉಪಾಧ್ಯಕ್ಷ ಪಿ. ರಮೇಶ್ ಆರೋಪಿಸಿದರು. ಕಳೆದ 25 ವರ್ಷಗಳಿಂದ ಕೋಟ್ಯಂತರ ರೂ. ಉಪಯೋಗಿಸದೇ ಲ್ಯಾಪ್ಸ್ ಆಗಿ ಹೋಗಿದೆ ಎಂದು ರಮೇಶ್ ಆರೋಪಿಸಿದರು. ವರಪ್ರಸಾದ್ ಕೋಟೆಕಣಿ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನಿಲ್,  ಮಂಡಲ ಅಧ್ಯಕ್ಷ  ಗುರುಪ್ರಸಾದ್ ಪ್ರಭು, ಸವಿತ, ಪ್ರಮೀಳಾ ಮಜಲ್, ವೀಣಾ ಅರುಣ್ ಶೆಟ್ಟಿ, ನಗರಸಭಾ ಕೌನ್ಸಿಲರ್‌ಗಳು, ಮಂಡಲ, ಟೌನ್ ಸಮಿತಿ ಪದಾಧಿಕಾರಿಗಳು ಭಾಗವಹಿಸಿದರು.

Leave a Reply

Your email address will not be published. Required fields are marked *

You cannot copy content of this page