ಕಾಸರಗೋಡು ರೈಲು ನಿಲ್ದಾಣದಲ್ಲಿ ಲಿಫ್ಟ್ ಮತ್ತು ಎಕ್ಸಲೇಟರ್, ಕುಂಬಳೆ, ಹೊಸದುರ್ಗದಲ್ಲಿ ಲಿಫ್ಟ್
ಕಾಸರಗೋಡು: ಕಾಸರಗೋಡು, ಕುಂಬಳೆ ಮತ್ತು ಹೊಸದುರ್ಗ ರೈಲು ನಿಲ್ದಾಣಗಳಲ್ಲಿ ತಲಾ ಎರಡರಂತೆ ಲಿಫ್ಟ್ ಸೌಕರ್ಯ ಏರ್ಪಡಿಸಲಾಗುವುದು. ಇದರ ಹೊರತಾಗಿ ಕಾಸರಗೋಡು ರೈಲು ನಿಲ್ದಾಣದಲ್ಲಿ ಲಿಫ್ಟ್ನ ಹೊರತಾಗಿ ಎರಡು ಎಕ್ಸಲೇಟರ್ ಸೌಕರ್ಯವನ್ನು ಏರ್ಪಡಿಸಲಾಗುವುದು.
ಪಾಲಕ್ಕಾಡ್ ರೈಲ್ವೇ ಡಿವಿಷನ್ಗೊಳಪಟ್ಟ ಪ್ರದೇಶದ ಸಂಸದರ ಸಭೆ ಕರೆದು ನಡೆಸಿದ ಚರ್ಚೆಯಲ್ಲಿ ರೈಲ್ವೇ ಇಲಾಖೆಯ ಉನ್ನತ ಅಧಿಕಾರಿಗಳು ಈ ವಿಷಯ ತಿಳಿಸಿದ್ದಾರೆ.
ಕಾಸರಗೋಡು ಮತ್ತು ಹೊಸದುರ್ಗ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಅತ್ತಿತ್ತ ಸಾಗಲು ಸಹಾಯವಾಗುವ ರೀತಿಯಲ್ಲಿ ಮೇಲ್ಸೇತುವೆ ನಿರ್ಮಾಣ ಕೆಲಸ ಈಗ ಭರದಿಂದ ಸಾಗುತ್ತಿದೆ. ಉಪ್ಪಳ, ಕುಂಬಳೆ, ಮಂಜೇಶ್ವರ, ಚೆರುವತ್ತೂರು ಮತ್ತು ನೀಲೇಶ್ವರ ರೈಲು ನಿಲ್ದಾಣಗಳಲ್ಲಿ ಇನ್ನು ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಲಾಗುವುದು. ನೀಲೇಶ್ವರ ರೈಲು ನಿಲ್ದಾಣದಲ್ಲಿ ಇಲೆಕ್ಟ್ರೋನಿಕ್ ಟ್ರೈನಿ ಇಂಡಿಕೇಟರ್ ಬೋರ್ಡ್ ಸ್ಥಾಪಿಸಲಾಗುವುದು. ಕಾಸರಗೋಡು ಮತ್ತು ಹೊಸದುರ್ಗದಲ್ಲಿ ಇಂತಹ ಬೋರ್ಡ್ಗಳನ್ನು ಈ ಹಿಂದೆಯೇ ಸ್ಥಾಪಿಸಲಾಗಿತ್ತು. ಇನ್ನು ಕಾಸರಗೋಡು ರೈಲು ನಿಲ್ದಾಣದಲ್ಲಿ ಸ್ಥಾಪಿಸಿರುವ ಕೋಚ್ ಗೈಡನ್ಸ್ ಡಿಸ್ಪ್ಲೇ ಬೋರ್ಡನ್ನು ನೀಲೇಶ್ವರದಲ್ಲೂ ಸ್ಥಾಪಿಸುವ ತೀರ್ಮಾನವನ್ನು ಸಭೆ ಕೈಗೊಂಡಿದೆ.
ಅಮೃತ್ ಸ್ಟೇಶನ್ ಯೋಜನೆಯಲ್ಲಿ ಒಳಪಡಿಸಿ ಕಾಸರಗೋಡು ರೈಲು ನಿಲ್ದಾಣದ ನವೀಕರಣ ಕೆಲಸ ಈಗ ಭರದಿಂದ ಸಾಗುತ್ತಿದೆ.
ಇದರ ಹೊರತಾಗಿ ಜಿಲ್ಲೆಯ ಎಲ್ಲಾ ರೈಲು ನಿಲ್ದಾಣಗಳಲ್ಲಿ ವಿಮಾನ ನಿಲ್ದಾಣಗಳಲ್ಲಿರುವ ರೀತಿಯ ಬೆಳಕು ಸೌಕರ್ಯಗಳನ್ನು ಏರ್ಪಡಿಸಲಾಗುವುದು. ಇದಕ್ಕಾಗಿ ಎಲ್ಲಾ ರೈಲು ನಿಲ್ದಾಣಗಳಲ್ಲಿ ಅಗತ್ಯದ ಸ್ಥಳವನ್ನು ಈಗಾಗಲೇ ಗುರುತಿಸಲಾಗಿದೆ. ಮಾತ್ರವಲ್ಲದೆ ಕಾಸರಗೋಡು ಮತ್ತು ಚೆರುವತ್ತೂರುನಲ್ಲಿ ತಲಾ ಎರಡರಂತೆ, ಹೊಸದುರ್ಗದಲ್ಲಿ ೪ ಮತ್ತು ಕುಂಬಳೆ ನಿಲ್ದಾಣದಲ್ಲಿ ಒಂದು ಕ್ಯಾಟರಿಂಗ್ ಘಟಕವನ್ನು ಆರಂಭಿಸಲಾಗುವುದು.