ಕುಂಬಳೆ ಪಂಚಾಯತ್ ಭ್ರಷ್ಟಾಚಾರ ತನಿಖೆಗೆ ಒತ್ತಾಯಿಸಿ 4ತಿಂಗಳ ಹಿಂದೆ ವಿಜಿಲೆನ್ಸ್‌ಗೆ ಬಿಜೆಪಿ ದೂರು: ತನಿಖೆ ಆಮೆನಡಿಗೆಯಲ್ಲಿ ಆರೋಪ
ಕುಂಬಳೆ: ಪಂಚಾಯತ್ ಕಚೇರಿಯ ಒಳಗೆ ನುಗ್ಗಿ ಕಾರ್ಯದರ್ಶಿ ಇಲ್ಲದ ವೇಳೆ ಕಚೇರಿಯ ಕಡತಗಳನ್ನು ಹುಡುಕಾಡುತ್ತಿದ್ದ ವೀಡಿಯೋ 5 ತಿಂಗಳ ಹಿಂದೆ ನಡೆದ ಘಟನೆಯಾಗಿದೆ ಎಂದು ಬಹಿರಂಗಗೊಂಡಿದೆ. ಪಂಚಾಯತ್ ಅಧ್ಯಕ್ಷೆಯ ಪತಿ ಕಡತಗಳನ್ನು ಪರಿಶೀಲಿಸಲು ಅನಧಿ ಕೃತವಾಗಿ ಕಚೇರಿಗೆ ನುಗ್ಗಿರುವುದಾಗಿ ದೂರಲಾಗಿದೆ. ಈ ದೃಶ್ಯ ಈಗ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಕಳೆದ ಮಾರ್ಚ್‌ನಲ್ಲೇ ಬಿಜೆಪಿ ವಿಜಿಲೆನ್ಸ್‌ಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ. ಕುಂಬಳೆ ಮಂಡಲ ಬಿಜೆಪಿ ಕಾರ್ಯದರ್ಶಿ ಎಂ. ಪ್ರದೀಪ್ ಕುಮಾರ್ ದೂರು ನೀಡಿ ಪ್ರಕರಣ ದಾಖಲಾಗಿದ್ದರೂ ವಿಜಿಲೆನ್ಸ್ ಅಧಿಕಾರಿಗಳು ತನಿಖೆ ಮುಂದುವರಿಸ ಲಿಲ್ಲವೆಂದು ಬಿಜೆಪಿ ದೂರಿದೆ.
ಪಂಚಾಯತ್ ಆಡಳಿತದ ಭ್ರಷ್ಟಾಚಾರದ ಬಗ್ಗೆ ಬಿಜೆಪಿ ನಾಲ್ಕು ದೂರು ನೀಡಿದ್ದು, ಆದರೆ ಈ ಬಗ್ಗೆ ವಿಜಿಲೆನ್ಸ್ ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಬಿಜೆಪಿ ಮಂಡಲ ಕಾರ್ಯದರ್ಶಿ ಪ್ರದೀಪ್ ಕುಮಾರ್ ಆರೋಪಿಸಿದ್ದಾರೆ. ಕುಂಬಳೆ ಕಡವಿನಿಂದ ಹೊಯ್ಗೆ ತೆಗೆಯುವುದರಲ್ಲಿ ಭ್ರಷ್ಟಾಚಾರ, ಬದಿಯಡ್ಕ ರಸ್ತೆಯ ಟೇಕ್ ಎ ಬ್ರೇಕ್ ಕಟ್ಟಡ ನಿರ್ಮಾಣ ಮತ್ತು ಬದಿಯಡ್ಕ ರಸ್ತೆಯ ಬಸ್ ಶೆಲ್ಟರ್ ಕಾಮಗಾರಿ ಸಂಬಂಧಿಸಿ ಭ್ರಷ್ಟಾಚಾರ ನಡೆದಿರುವುದಾಗಿ ಬಿಜೆಪಿ ದೂರಿದ್ದು, ಇದರ ತನಿಖೆಗೆ ಒತ್ತಾಯಿಸಿ ದೂರು ನೀಡಲಾಗಿತ್ತು. ಆದರೆ ಈ ದೂರುಗಳಲ್ಲಿ ಯಾವುದೇ ಪ್ರಗತಿ ಉಂಟಾಗಲಿಲ್ಲವೆಂದು ಬಿಜೆಪಿ ದೂರಿದೆ.
ಬಿಜೆಪಿ ವಿಜಿಲೆನ್ಸ್‌ಗೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಪಂಚಾಯತ್ ಅಧ್ಯಕ್ಷೆಯ ಪತಿ ಹಾಗೂ ಗುತ್ತಿಗೆದಾರನೋರ್ವ ಪಂ. ಕಾರ್ಯದರ್ಶಿಯಿಂದ ಬಸ್ ಶೆಲ್ಟರ್ ನಿರ್ಮಾಣದ ಯೋಜನಾ ಮೊತ್ತ ಮಂಜೂರು ಮಾಡುವಂತೆ ಒತ್ತಾಯಿಸಿ ಬೆದರಿಕೆಯೊಡ್ಡಿರುವುದಾಗಿಯೂ ಬಿಜೆಪಿ ದೂರಿದೆ. ಈ ಬಗ್ಗೆ ಕಾರ್ಯದರ್ಶಿ ದೃಶ್ಯ ಚಿತ್ರೀಕರಿಸಿ ಸದಸ್ಯರ ವಾಟ್ಲಪ್ ಗ್ರೂಪ್‌ನಲ್ಲಿ ಹಂಚಿಕೊಂಡಿರುವುದು ಪ್ರತಿಭಟನೆಗೆ ಹೊಸ ರೂಪು ನೀಡಿದಂತಾಗಿದೆ. ಭ್ರಷ್ಟಾಚಾರ ತನಿಖೆಯನ್ನು ತೀವ್ರಗೊಳಿಸಿ ಪ್ರಕರಣಗಳ ಸತ್ಯಾವಸ್ಥೆ ಬಹಿರಂಗಗೊಳಿಸಿ ಆರೋಪಿಗಳಿಗೆ ಶಿಕ್ಷೆ ಲಭಿಸುವಂತೆ ಮಾಡಬೇಕೆಂದು ಬಿಜೆಪಿ ಆಗ್ರಹಿಸಿದೆ.