ಕೊಲೆಗೈಯ್ಯಲ್ಪಟ್ಟ ಯೂತ್ ಕಾಂಗ್ರೆಸ್‌ನ ಶರತ್‌ಲಾಲ್ ಮನೆಗೆ ಕಲ್ಲೆಸೆದ ಪ್ರಕರಣ: ಕೊಲೆ ಆರೋಪಿಯನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿದ ಸಿಬಿಐ
ಕಾಸರಗೋಡು: ಪೆರಿಯದ ಕಲ್ಯೋಟ್‌ನಲ್ಲಿ ರಾಜಕೀಯ ದ್ವೇಷದಿಂದ ಕೊಲೆಗೈಯ್ಯಲ್ಪಟ್ಟ ಯೂತ್ ಕಾಂಗ್ರೆಸ್ ಕಾರ್ಯ ಕತರಾದ ಕಲ್ಯೋಟ್‌ನ ಶರತ್‌ಲಾಲ್ ಮತ್ತು ಕೃಪೇಶ್‌ನ ಪೈಕಿ ಕೊಲೆಗೆ ಹಲವು ತಿಂಗಳ ಹಿಂದೆ ಶರತ್‌ಲಾಲ್‌ನ ಮನೆಗೆ ಕಲ್ಲು ತೂರಾಟ ನಡೆಸಿದ ಆರೋಪಿಯನ್ನು ಹೊಸದುರ್ಗ ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಸಿಬಿಐ ನಿನ್ನೆ ಹಾಜರುಪಡಿಸಿದೆ. ಕಲ್ಲು ತೂರಾಟ ಪ್ರಕರಣದ ೧೫ನೇ ಆರೋಪಿಯಾಗಿರುವ ವಿಷ್ಣುಪುರದ ಎ. ಸುರೇಂದ್ರನ್ ನ್ಯಾಯಾಲಯದಲ್ಲಿ ಹಾಜರುಪಡಿಸಲಾದ ವ್ಯಕ್ತಿ. ಈತ ಶರತ್‌ಲಾಲ್ ಮತ್ತು ಕೃಪೇಶ್‌ರನ್ನು ಕೊಲೆಗೈಯ್ಯಲ್ಪಟ್ಟ ಪ್ರಕರಣದಲ್ಲ್ಲೂ ಆರೋಪಿಯಾಗಿದ್ದು ಅದಕ್ಕೆ ಸಂಬಂಧಿಸಿ ಆತನನ್ನುಸಿಬಿಐ ಈ ಹಿಂದೆ ಬಂಧಿಸಿ ನಂತರ ಕಾಕನಾಡ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಶರತ್‌ಲಾಲ್‌ರ ಮನೆಗೆ ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಆತನ್ನು ಹಾಜರುಪಡಿಸವಂತೆ ಹೊಸದುರ್ಗ ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ ಆದೇಶ ನೀಡಿತ್ತು. ಅದರಂತೆ ಆತನನ್ನು ಸಿಬಿಐ ಕಾಕನಾಡು ಜೈಲಿನಿಂದ ಹೊಸದುರ್ಗದಲ್ಲಿರುವ ಜಿಲ್ಲಾ ಕಾರಾಗೃಹಕ್ಕೆ ಮೊದಲು ತಂದು ಅಲ್ಲಿಂದ ಆತನನ್ನು ಹೊಸದುರ್ಗ ನ್ಯಾಯಾಲಯದಲ್ಲಿ ಹಾಜರುಪಡಿಸಿದೆ. ಮನೆಗೆ ಕಲ್ಲು ತೂರಾಟ ನಡೆಸಿದ ಪ್ರಕರಣದ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯದಲ್ಲಿ ಆರೋಪಿಗೆ ಓದಿ ತಿಳಿಸಲಾಯಿತು. ನಂತರ ಆತನನ್ನು ಸಿಬಿಐ ಮತ್ತೆ ಜೈಲಿಗೆ ಹಿಂತಿರುಗಿಸಿದೆ.
ಕಲ್ಯೋಟ್ ಅವಳಿ ಕೊಲೆ ಪ್ರಕರಣದ ಒಂದನೇ ಆರೋಪಿ ಯಾಗಿದ್ದು, ಈಗ ವಿಚಾರಣಾಧೀನ ಖೈದಿಯಾಗಿ ಜೈಲಿನಲ್ಲಿ ಕಳೆಯುತ್ತಿರುವ ಸಿಪಿಎಂ ನೇತಾರ ಪೀತಾಂಭರನ್ ಕೂಡಾ ಶರತ್‌ಲಾಲ್‌ನ ಮನೆಗೆ ಕಲ್ಲು ತೂರಾಟ ನಡೆಸಿದ ಪ್ರಕರಣದ ಇನ್ನೋರ್ವ ಆರೋಪಿಯಾಗಿದ್ದಾನೆ. ಆತನನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿ ಕೆಲವು ದಿನಗಳ ಹಿಂದೆ ಆನ್‌ಲೈನ್ ಮೂಲಕ ಹೊಸದುರ್ಗ ಮೆಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿತ್ತು. ಅದಾದ ಬಳಿಕ ಅದೇ ಇನ್ನೋರ್ವ ಆರೋಪಿ ಸುರೇಂದ್ರನ್‌ನನ್ನು ಸಿಬಿಐ ಇದೇ ನ್ಯಾಯಾಲಯಕ್ಕೆ ನಿನ್ನೆ ಹಾಜರುಪಡಿಸಿದೆ.