ಠಾಣೆಗೆ ನುಗ್ಗಿ ಕಾಂಗ್ರೆಸ್ ಕಾರ್ಯಕರ್ತರಿಗೆ ಸಿಪಿಎಂ, ಡಿಫಿ ಕಾರ್ಯಕರ್ತರಿಂದ ಹಲ್ಲೆ: 3 ಮಂದಿ ಸೆರೆ
ಕೊಲ್ಲಂ: ಆಕ್ರಮಣದಿಂದ ಗಾಯಗೊಂಡು ದೂರು ನೀಡಲು ತಲುಪಿದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸ್ ಠಾಣೆಗೆ ನುಗ್ಗಿ ಹಲ್ಲೆ ನಡೆಸಿದ ಸಿಪಿಎಂ ಕಾರ್ಯಕರ್ತರು ಪೊಲೀಸರನ್ನು ಆಕ್ರಮಿಸಿದ್ದಾರೆ. ಒಂದು ಗಂಟೆಗಳ ಕಾಲ ಪೊಲೀಸ್ ಠಾಣೆಯಲ್ಲಿ ಸಂಘರ್ಷಾವಸ್ಥೆ ಸೃಷ್ಟಿಸಿದ್ದಾರೆ. ಆದರೆ ಏನೂ ಮಾಡಲಾಗದ ಸ್ಥಿತಿಯಲ್ಲಿ ಪೊಲೀಸರು ನೋಡಿ ನಿಂತಿದ್ದಾರೆ. ಮೊನ್ನೆ ರಾತ್ರಿ 10 ಗಂಟೆ ವೇಳೆ ಘಟನೆ ನಡೆದಿದೆ. ಆಕ್ರಮಣ ನಡೆಸಿದ 5 ಮಂದಿಯ ತಂಡದ 3 ಮಂದಿಯನ್ನು ಕಾಂಗ್ರೆಸ್ ಮುಖಂಡರ ಪ್ರತಿಭಟನೆ ಹಿನ್ನೆಲೆಯಲ್ಲಿ ಕಡಯ್ಕಲ್ ಇನ್ಸ್ಪೆಕ್ಟರ್ ಬಂಧಿಸಿದ್ದಾರೆ. ಇಬ್ಬರು ಪೊಲೀಸರಿಂದ ತಪ್ಪಿಸಿಕೊಂಡಿದ್ದಾರೆ.
ಸಿಪಿಎA ಮುಕುನ್ನಂ ಬ್ರಾಂಚ್ ಕಾರ್ಯದರ್ಶಿ ಮುಕುನ್ನಂ ಕೆ.ಕೆ. ಹೌಸ್ನ ಸಜೀರ್ (40), ವಿಮಲ್ ಕುಮಾರ್ (45), ವಿಶಾಖ್ (34) ಸೆರೆಯಾದವರು. ಎಂ.ಕೆ. ಸಾಹಿರ್, ಅಕ್ಷಯ್ ಎಂಬವರು ತಲೆ ಮರೆಸಿಕೊಂಡಿದ್ದಾರೆ. ಗಾಯಗೊಂಡ ಯೂತ್ ಕಾಂಗ್ರೆಸ್ ಕಾರ್ಯ ಕರ್ತರಾದ ಚೆರುಕರ ವೀಟ್ಟಿಲ್ ಜಿಷ್ಣು (29), ಸಚಿನ್ (30), ಅನೂಪ್ (34) ಹಾಗೂ ಠಾಣೆಯ ಪೊಲೀಸ್ ಗ್ರೇಡ್ ಎಸ್ಐ ವಿನೋದ್ ಕುಮಾರ್ (52), ಸಿವಿಲ್ ಪೊಲೀಸ್ ಅಧಿಕಾರಿ ಬಿನ್ಸಿ (42) ಎಂಬಿವರನ್ನು ಅಲ್ಲಿನ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.