ನಿತ್ಯಾನಂದ ಪಾಲಿಟೆಕ್ನಿಕ್ ಪ್ರಾಂಶುಪಾಲ, ಉಪನ್ಯಾಸಕ ನೇಮಕಾತಿ ರದ್ದು
ಹೊಸದುರ್ಗ: ಕಾಞಂಗಾಡ್ನ ಸ್ವಾಮಿ ನಿತ್ಯಾನಂದ ಪಾಲಿಟೆಕ್ನಿಕ್ನ ಪ್ರಾಂಶುಪಾಲ, ಉಪನ್ಯಾಸಕರ ನೇಮಕಾತಿಯನ್ನು ರದ್ದುಗೊಳಿಸಲಾಗಿದೆ. ಪ್ರಾಂಶುಪಾಲ ಸೆಬಾಸ್ಟಿಯನ್ ಥೋಮಸ್, ಇಲೆಕ್ಟ್ರಿಕಲ್ ಲೆಕ್ಚರರ್ ಶೈಜಿ ಜೋಸ್, ಟ್ರೇಡ್ಸ್ ಮೆನ್ ರಾಹುಲ್, ವಾಚ್ಮೆನ್ ಜಿತೇಶ್ ಎಂಬಿವರ ನೇಮಕಾತಿಯನ್ನು ಎಐಸಿಟಿಇ ರದ್ದುಗೊಳಿಸಿದೆ. ಶ್ರೀ ನಿತ್ಯಾನಂದ ವಿದ್ಯಾಕೇಂದ್ರದ ಅಧೀನದಲ್ಲಿ ನಿತ್ಯಾನಂದ ಪಾಲಿಟೆಕ್ನಿಕ್ ಕಾಲೇಜು ಕಾರ್ಯಾಚರಿಸುತ್ತಿದೆ. ೨೦೨೧ರಲ್ಲಿ ಮೆನೇಜ್ಮೆಂಟ್ನಲ್ಲಿ ಉಂಟಾದ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಸೆಕ್ರೆಟರಿ ಟಿ. ಪ್ರೇಮಾನಂದನ್ ಹಾಗೂ ಇತರ ಪದಾಧಿಕಾರಿಗಳನ್ನು ಅವಗಣಿಸಿ ಪಾಲಿಟೆಕ್ನಿಕ್ ಕಾಲೇಜಿನ ಅಂದಿನ ಗವರ್ನಿಂಗ್ ಬೋರ್ಡ್ ಚೆಯರ್ ಮೆನ್ ಕೆ.ಎಲ್. ನಿತ್ಯಾನಂದ ಹೋಡೆ ಆಟೋ ಮೊಬೈಲ್ ವಿಭಾಗದ ಮುಖ್ಯಸ್ಥರಾಗಿದ್ದ ಸೆಬಾಸಿನ್ ಥೋಮಸ್ರನ್ನು ಪ್ರಾಂಶುಪಾಲರಾಗಿ ನೇಮಿಸಿದ್ದರು. ಎಐಸಿಟಿಯ ಮಾನ ದಂಡ ಪ್ರಕಾರ ೨೦ ವರ್ಷದ ಅಧ್ಯಾಪಕ ಅನುಭವ ಅನಿವಾರ್ಯವಾಗಿದೆ. ಆದರೆ ಅಷ್ಟು ಕಾಲದ ಅಧ್ಯಾಪಕ ಅನುಭವ ಅವರಿಗೆ ಇಲ್ಲವೆಂದೂ ಪೋಸ್ಟ್ ಗ್ರಾಜ್ಯುವೆಟ್ ಡಿಗ್ರಿ ರೆಗ್ಯುಲರ್ ಕಾಲೇಜಿನಲ್ಲಿ ಕಲಿತಿಲ್ಲವೆಂದು ತನಿಖೆಯಲ್ಲಿ ತಿಳಿದುಬಂದಿದೆ. ಈಬಗ್ಗೆ ವರದಿಯನ್ನು ಎಐಸಿಟಿಇ ರಾಜ್ಯ ತಾಂತ್ರಿಕ ಶಿಕ್ಷಣ ಇಲಾಖೆ ಡೈರೆಕ್ಟರ್ಗೆ ಕಳುಹಿಸಿದ್ದರೂ ಕ್ರಮವುಂಟಾಗಲಿಲ್ಲ. ಆದ್ದರಿಂದ ಪ್ರಾಂಶುಪಾಲ ಸಹಿತ ನೇಮಕಾತಿ ರದ್ದುಪಡಿಸಿ ಎಐಸಿಟಿಯು ಆದೇಶ ಹೊರಡಿಸಿದೆ.