ಪತ್ನಿಯ ಸೀಮಂತಕ್ಕಾಗಿ ಎರಡು ದಿನಗಳ ಹಿಂದೆ ಗಲ್ಫ್ನಿಂದ ಊರಿಗೆ ಬಂದ ಯುವಕ ಬೈಕ್ ಅಪಘಾತದಲ್ಲಿ ಮೃತ್ಯು
ಕುಂಬಳೆ: ಎರಡು ದಿನಗಳ ಹಿಂದೆ ಯಷ್ಟೇ ಪತ್ನಿಯ ಸೀಮಂತ ಕಾರ್ಯ ಕ್ರಮಕ್ಕಾಗಿ ಗಲ್ಫ್ನಿಂದ ಊರಿಗೆ ಬಂದ ಯುವಕ ಬೈಕ್ ಅಪಘಾತದಲ್ಲಿ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ.
ಬಂಬ್ರಾಣ ಉಜಾರು ನಿವಾಸಿ ದಿ| ಅಮ್ಮು ಶೆಟ್ಟಿ ಎಂಬವರ ಪುತ್ರ ಅಜಿತ್ ಶೆಟ್ಟಿ (31) ಮೃತಪಟ್ಟ ದುರ್ದೈವಿ ಯಾಗಿದ್ದಾರೆ. ನಿನ್ನೆ ರಾತ್ರಿ 9.30ರ ವೇಳೆ ಆರಿಕ್ಕಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಇವರು ಮೃತಪಟ್ಟಿದ್ದಾರೆ.
ಇವರು ಖತ್ತರ್ನಲ್ಲಿ ಉದ್ಯೋಗ ದಲ್ಲಿದ್ದರು. ಈ ತಿಂಗಳ 22ರಂದು ಇವರು ಊರಿಗೆ ಬಂದಿದ್ದರು. 23ರಂದು ಪತ್ನಿಯ ಸೀಮಂತ ಕಾರ್ಯಕ್ರಮ ನಡೆದಿತ್ತು. ನಿನ್ನೆ ರಾತ್ರಿ ಕುಂಬಳೆ ಪೇಟೆಗೆ ಬಂದ ಅಜಿತ್ ಶೆಟ್ಟಿ ಆಹಾರ ವಸ್ತುಗಳನ್ನು ಖರೀದಿಸಿ ಬುಲ್ಲೆಟ್ ಬೈಕ್ನಲ್ಲಿ ಮನೆಗೆ ಮರಳುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಆರಿಕ್ಕಾಡಿ ಶ್ರೀ ಹನುಮಾನ್ ಕ್ಷೇತ್ರ ಸಮೀಪ ಬೈಕ್ ರಸ್ತೆಯ ಡಿವೈಡರ್ಗೆ ಢಿಕ್ಕಿ ಹೊಡೆದು ಅಪಘಾತವುಂಟಾಗಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡ ಇವರನ್ನು ಸ್ಥಳೀಯರು ಹಾಗೂ ಇತರ ಪ್ರಯಾಣಿಕರು ಸೇರಿಕೂಡಲೇ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದಾಗ ದಾರಿ ಮಧ್ಯೆ ನಿಧನ ಸಂಭವಿಸಿದೆ. ಮೃತದೇಹವನ್ನು ಮಂಗಳೂರಿನ ಆಸ್ಪತ್ರೆಯಲ್ಲಿರಿಸಿದ್ದು ಇಂದು ಮರಣೋತ್ತರ ಪರೀಕ್ಷೆ ಬಳಿಕ ಊರಿಗೆ ತರಲಾಗುವುದು. ಯುವಕನ ಅಕಾಲಿಕ ನಿಧನದಿಂದ ನಾಡಿನಲ್ಲಿ ಶೋಕಸಾಗರ ಸೃಷ್ಟಿಯಾಗಿದೆ.
ಮೃತರು ತಾಯಿ ರತ್ನಾವತಿ, ಪತ್ನಿ ರೂಪಶ್ರೀ, ಸಹೋದರ ಅನಿಲ್ ಶೆಟ್ಟಿ, ಸಹೋದರಿ ಅನಿತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.