ಬಾವಿಗೆ ಹಾರಿದ ವ್ಯಕ್ತಿಯರಕ್ಷಿಸಲು ಹಾರಿದ ಪಂ. ಸದಸ್ಯ ಇಬ್ಬರನ್ನು ಅಗ್ನಿಶಾಮಕದಳ ಮೇಲೆತ್ತಿ ರಕ್ಷಣೆ
ಉಪ್ಪಳ: ಬಾವಿಗೆ ಹಾರಿದ ವ್ಯಕ್ತಿ ಯನ್ನು ರಕ್ಷಿಸಲೆಂದು ಹಾರಿದ ವ್ಯಕ್ತಿ ಕೂಡಾ ಬಾವಿಯಿಂದ ಮೇಲೇರಲಾಗದೆ ಅಗ್ನಿಶಾಮಕದಳ ತಲುಪಿ ಮೇಲೆತ್ತಿದ ಘಟನೆ ಮಂಗಲ್ಪಾಡಿಯಲ್ಲಿ ನಿನ್ನೆ ಸಂಭವಿಸಿದೆ. ಬಂದ್ಯೋಡು ಬಳಿಯ ಚೂಕಿರಿ ಅಡ್ಕ ನಿವಾಸಿ ನಝೀರ್ (೬೦) ಬಾವಿಗೆ ಹಾರಿದ್ದು, ಇವರನ್ನು ರಕ್ಷಿಸಲು ಹಾರಿದ ಮಂಗಲ್ಪಾಡಿ ಪಂ. ಸದಸ್ಯ ಇಬ್ರಾಹಿಂ (ಉಂಬಯಿ) ಪೆರಿಂಗಡಿ ಬಾವಿಯಲ್ಲಿ ಸಿಲುಕಿಕೊಂಡವರು. ಬಳಿಕ ಅಗ್ನಿಶಾಮಕದಳ ತಲುಪಿ ಇವರಿಬ್ಬರನ್ನು ಮೇಲೆತ್ತಿ ನಝೀರ್‌ನನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಇಂದು ಕಣ್ಣೂರು ಪರಿಯಾರಂ ಮೆಡಿಕಲ್ ಕಾಲೇಜಿಗೆ ಕೊಂಡೊಯ್ಯಲಾಗಿದೆ.
ನಝೀರ್ ಮಂಗಲ್ಪಾಡಿ ಪಂ. ಕಚೇರಿಗೆ ನಿನ್ನೆ ಮಧ್ಯಾಹ್ನ ತಲುಪಿದ್ದು, ಅಲ್ಲಿ ತಲೆಸುತ್ತಿ ಬಿದ್ದಿದ್ದಾರೆನ್ನಲಾಗಿದೆ. ಕೂಡಲೇ ಇವರನ್ನು ಅಲ್ಲಿದ್ದವರು ಮಂಗಲ್ಪಾಡಿ ಆಸ್ಪತ್ರೆಗೆ ಸಾಗಿಸಿದ್ದು, ಬಳಿಕ ಆಸ್ಪತ್ರೆಯಿಂದ ಎದ್ದು ಹೋದ ಇವರು ಸಮೀಪದ ಬಾವಿಗೆ ಹಾರಿದ್ದರೆನ್ನಲಾಗಿದೆ. ಇದನ್ನು ಕಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಮಾಜ ಸೇವಕರೊಬ್ಬರು ಮಂಗಲ್ಪಾಡಿ ಪಂ. ಸದಸ್ಯ ಇಬ್ರಾಹಿಂರಿಗೆ ತಿಳಿಸಿದ್ದು, ಕೂಡಲೇ ಅವರು ಕೂಡಾ ಜೀವದ ಹಂಗು ತೊರೆದು ಬಾವಿಗೆ ಹಾರಿದ್ದಾರೆ. ಬಾವಿಯಲ್ಲಿ ನಝೀರ್ ಮುಳುಗುವುದನ್ನು ತಪ್ಪಿಸಿದ ಇಬ್ರಾಹಿಂ ಅವರನ್ನು ಎತ್ತಿ ಹಿಡಿಯುವ ಮಧ್ಯೆ ಇಬ್ರಾಹಿಂರ ಕಾಲು ಕೆಸರಿನಲ್ಲಿ ಹೂತುಹೋಗಿದೆ. ಇದರಿಂದಾಗಿ ಇಬ್ಬರಿಗೂ ಮೇಲೇರಲಾಗದ ಸ್ಥಿತಿ ಉಂಟಾಗಿದೆ. ಅಗ್ನಿಶಾಮಕದಳ ತಲುಪಿ ಮತ್ತೆ ಇವರಿಬ್ಬರನ್ನು ಮೇಲೆತ್ತಲಾಗಿದೆ.
ನಝೀರ್ ಈ ಹಿಂದೆ ಓರ್ವ ವಿಲ್ಲೇಜ್ ಆಫೀಸರ್‌ರ ವಿರುದ್ಧ ದೂರು ನೀಡಿರುವುದಾಗಿಯೂ ಆ ದೂರನ್ನು ಹಿಂತೆಗೆಯಬೇಕೆಂದು ನಿನ್ನೆ ಮಂಗ ಲ್ಪಾಡಿಯಲ್ಲಿ ಪೊಲೀಸ್ ಅಧಿಕಾರಿಗಳು ಆಗ್ರಹಿಸಿ ಬೆದರಿಸಿರುವುದಾಗಿಯೂ ಹೇಳಲಾಗುತ್ತಿದೆ. ಇದರಿಂದ ಅಸ್ವಸ್ಥಗೊಂಡು ಕುಸಿದಿರುವುದೆಂದೂ ಹೇಳಲಾಗುತ್ತಿದೆ. ಆದರೆ ಬಾವಿಗೆ ಬಿದ್ದ ವ್ಯಕ್ತಿಯನ್ನು ರಕ್ಷಿಸಿದ ಪಂ. ಸದಸ್ಯ ಇಬ್ರಾಹಿಂರನ್ನು ಸ್ಥಳೀಯರು ಪ್ರಶಂಸಿಸಿದ್ದಾರೆ.