ಬೆಂಗಳೂರಿನಲ್ಲಿ ಚಿಟ್ ಫಂಡ್ ಹೆಸರಲ್ಲಿ ಕೋಟ್ಯಂತರ ರೂ.ಗಳ ವಂಚನೆ: ಕೇರಳದ ದಂಪತಿ ವಿರುದ್ಧ ಎಫ್ಐಆರ್; ರಾಜ್ಯಕ್ಕೂ ತನಿಖೆ ವಿಸ್ತರಣೆ
ತಿರುವನಂತಪುರ: ಚಿಟ್ ಫಂಡ್ ಹೆಸರಲ್ಲಿ ಸಾರ್ವಜನಿಕರಿಂದ ಕೋಟ್ಯಂತರ ರೂ. ಪಡೆದು ಬಳಿಕ ವಂಚಿಸಿದ ದೂರಿನಂತೆ ಕೇರಳದ ದಂಪತಿ ವಿರುದ್ಧ ಬೆಂಗಳೂರು ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಆಲಪ್ಪುಳ ರಾರಮಂಕೇರಿ ನಿವಾಸಿಗಳಾದ ಎ.ವಿ. ಟೋಮಿ ಮತ್ತು ಅವರ ಪತ್ನಿ ಶೈನಿ ಟೋಮಿ ಎಂಬವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಇಬ್ಬರು 2005ರಿಂದ ಬೆಂಗಳೂರಿನ ರಾಮಮೂರ್ತಿನಗರದಲ್ಲಿ ಎ ಆಂಡ್ ಎ ಚಿಟ್ ಫಂಡ್ ಫೈನಾನ್ಸ್ ಸಂಸ್ಥೆ ನಡೆಸುತ್ತಿದ್ದರು. ಇವರು ಸಾರ್ವಜನಿಕರಿಂದ ಚಿಟ್ ಫಂಡ್ ಹೆಸರಲ್ಲಿ ಅಧಿಕ ಬಡ್ಡಿ ತೋರಿಸಿ ಠೇವಣಿ ಮತ್ತು ಬಡ್ಡಿ ರೂಪದಲ್ಲಿ ನೂರು ಕೋಟಿ ರೂ.ಗಿಂತಲೂ ಹೆಚ್ಚು ಹಣ ಸಂಗ್ರಹಿಸಿದ್ದಾರೆಂದು ಪೊಲೀಸರು ಅಂದಾಜಿಸಿದ್ದಾರೆ. ಹೀಗೆ ವಂಚನೆಗೊಳ ಗಾದವರಲ್ಲಿ ಬಹುಪಾಲು ಮಂದಿ ಕೇರಳೀಯರೇ ಆಗಿದ್ದಾರೆ. ಇದರಲ್ಲಿ ಓರ್ವರು ತಮ್ಮ ಮತ್ತು ಅವರ ಪತ್ನಿಯ ನಿವೃತ್ತಿ ಫಂಡ್ ಸೇರಿದಂತೆ 70 ಲಕ್ಷ ರೂ.ವನ್ನು ಈ ಚಿಟ್ ಫಂಡ್ನಲ್ಲಿ ಠೇವಣಿ ಇರಿಸಿದ್ದು, ಅವರು ನೀಡಿದ ದೂರಿನಂತೆ ಪೊಲೀಸರು ಕೇರಳದ ಈ ದಂಪತಿ ವಿರುದ್ಧ ಮೊದಲ ವಂಚನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳಿಬ್ಬರ ಮೊಬೈಲ್ ಫೋನ್ಗಳು ಈಗ ಸ್ವಿಚ್ ಆಫ್ಗೊಂಡ ಸ್ಥಿತಿಯಲ್ಲಿದೆ.
ಕೋಟ್ಯಂತರ ರೂ. ವಂಚಿಸಿರುವ ಪ್ರಕರಣ ಇದಾಗಿರುವುದರಿಂದಾಗಿ ಪ್ರಕರಣದ ತನಿಖೆಯನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ)ಗೆ ವರ್ಗಾಯಿಸುವ ಸಾಧ್ಯತೆಯಿದೆ. ಆರೋಪಿಗಳಾದ ಈ ದಂಪತಿ ತಲೆಮರೆಸಿಕೊಳ್ಳುವ ಮೊದಲು ಬೆಂಗಳೂರಿನಲ್ಲಿರುವ ತಮ್ಮ ಮನೆ ಮತ್ತು ಕಾರನ್ನು ಬೇರೆಯವರಿಗೆ ಮಾರಾಟ ಮಾಡಿರುವುದಾಗಿಯೂ ಪೊಲೀಸ್ ತನಿಖೆಯಲ್ಲ್ಲಿ ಸ್ಪಷ್ಟಗೊಂಡಿದೆ. ಈ ಚಿಟ್ ಫಂಡ್ ಸಂಸ್ಥೆಯಲ್ಲಿ ಕೆಲವು ಸಿಬ್ಬಂದಿಗಳು ದುಡಿಯುತ್ತಿದ್ದು, ವಂಚನೆ ವಿಷಯ ಅವರ ಗಮನಕ್ಕೂ ಬಂದಿರಲಿಲ್ಲವೆನ್ನಲಾಗಿದೆ. ಬೆಂಗಳೂರಿನಲ್ಲಿ ನೆಲೆಸಿರುವ ಕೇರಳೀಯರೊಂದಿಗೆ ಉತ್ತಮ ಸಂಪರ್ಕ ಬೆಳೆಸಿ ಆ ಮೂಲಕ ಅವರು ಚಿಟ್ ಫಂಡ್ ಹೆಸರಲ್ಲಿ ಅವರಿಂದಲೂ ಕೋಟಿಗಟ್ಟಲೆ ರೂ. ಹಣ ಸಂಗ್ರಹಿಸಿದ್ದರು. ಹೀಗೆ ವಂಚನೆಗೊಳಗಾದವರಲ್ಲಿ ಬೆಂಗಳೂರು ಮತ್ತು ಪರಿಸರ ಪ್ರದೇಶದವರು ಒಳಗೊಂಡಿದ್ದಾರೆ. ಆರೋಪಿಗಳು ಆಲಪ್ಪುಳ ಜಿಲ್ಲೆಯವರಾಗಿರುವುದರಿಂದಾಗಿ ಕರ್ನಾಟಕ ಪೊಲೀಸರು ತನಿಖೆಯನ್ನು ಕೇರಳಕ್ಕೂ ವಿಸ್ತರಿಸಿದ್ದಾರೆ. ಇದಕ್ಕೆ ಕೇರಳ ಪೊಲೀಸರು ಅಗತ್ಯದ ಸಹಾಯ ನೀಡುತ್ತಿದ್ದಾರೆ.