ಮದುವೆ ಕಾರ್ಯಕ್ರಮದಲ್ಲಿ ಹಾಡುತ್ತಿದ್ದಂತೆ ಯುವಕ ಕುಸಿದು ಬಿದ್ದು ಮೃತ್ಯು

ಕುಂಬಳೆ: ಮದುವೆ ಕಾರ್ಯಕ್ರಮದಲ್ಲಿ ಹಾಡುತ್ತಿದ್ದಂತೆ ಯುವಕ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ.

ಬಾಯಾರು ಬದಿಯೂರು ಸಾರ್ಕಾಜೆ ನಿವಾಸಿ ಮೋಣು ಎಂಬವರ ಪುತ್ರ ಮೊಹಮ್ಮದ್ ಅನ್ಸಾರ್ (೩೪) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಬಾಯಾರು ಸಮೀಪ ನಿನ್ನೆ ನಡೆದ ಸಂಬಂಧಿಕರ ಮದುವೆ ಕಾರ್ಯಕ್ರಮದಲ್ಲಿ ಮೊಹಮ್ಮದ್ ಅನ್ಸಾರ್ ಪಾಲ್ಗೊಂಡಿದ್ದರು. ಮದುವೆ ಅಂಗವಾಗಿ ನಡೆದ ಗಾನಮೇಳದಲ್ಲಿ ಹಾಡುತ್ತಿದ್ದಂತೆ ಇವರು ಕುಸಿದು ಬಿದ್ದಿದ್ದಾರೆ. ಕೂಡಲೇ ಉಪ್ಪಳ ಹಾಗೂ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ದರೂ ಜೀವ ರಕ್ಷಿಸಲಾಗಲಿಲ್ಲ. ಖತ್ತರ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮೊಹಮ್ಮದ್ ಅನ್ಸಾರ್ ೨ ತಿಂಗಳ ಹಿಂದೆ ಊರಿಗೆ ಆಗಮಿಸಿದ್ದರು. ಬಳಿಕ ಬಾಯಾರು ಪೇಟೆಯಲ್ಲಿ ವಾಹನಗಳ ಬಿಡಿ ಭಾಗ ಮಾರಾಟದಂಗಡಿ ಆರಂಭಿಸಿದ್ದರು. ಇವರ ಅಕಾಲಿಕ ನಿಧನದಿಂದ ನಾಡಿನಲ್ಲಿ ಶೋಕಸಾಗರ ಸೃಷ್ಟಿಯಾಗಿದೆ. ಮೃತರು ತಾಯಿ ಕುಂಞಾಲಿಮ್ಮ, ಪತ್ನಿ ರಂಸೀನ, ಪುತ್ರ ಮೊಹಮ್ಮದ್ ನಾಮಿಕ್, ಸಹೋದರರಾದ ಅಸೀಸ್, ಅನೀಶ್, ಅಪ್ಸಲ್, ಹಾರಿಸ್ ಹಾಗೂ ಅಪಾರ  ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page