ಮನೆಗೆ ಅಕ್ರಮವಾಗಿ ನುಗ್ಗಿ ಯುವಕನಿಗೆ ಇರಿತ : ಕಾಸರಗೋಡು ಚಿನ್ನ ಕಳ್ಳಸಾಗಾಟದಾರರ ಕೈವಾಡ ಶಂಕೆ
ಕಾಸರಗೋಡು: ವಯನಾಡು ಜಿಲ್ಲೆಯ ಕಲ್ಪೆಟ್ಟ ಮೀನಂಗಾಡಿಗೆ ಸಮೀಪದ ಕರಣಿಯ ಮನೆಯೊಂದಕ್ಕೆ ಅಕ್ರಮಿಗಳ ತಂಡವೊಂದು ಮುಂಜಾನೆ ಅಕ್ರಮವಾಗಿ ನುಗ್ಗಿ ಯುವಕನನ್ನು ಇರಿದು ಗಂಭೀರ ಗಾಯಗೊಳಿಸಿದ್ದು, ಇದು ಕಾಸರಗೋಡಿನ ಚಿನ್ನ ಕಳ್ಳಸಾಗಾ ಟದಾರರ ಕೃತ್ಯವಾಗಿದೆಯೆಂಬ ಶಂಕೆ ಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಕರಣಿ ನಿವಾಸಿ ಅಸ್ಕರ್ ಅಲಿ (೨೮) ಎಂಬಾತನ ಮೇಲೆ ಈತಿಂಗಳ ೧೨ರಂದು ಮುಂಜಾನೆ ಮುಖವಾಡ ಧರಿಸಿ ಬಂದ ಐವರು ಅಕ್ರಮಿಗಳ ತಂಡ ಮನೆ ಬಾಗಿಲು ಒಡೆದು ಒಳನುಗ್ಗಿ ಈ ದಾಳಿ ನಡೆಸಿದೆ. ಆ ವೇಳೆ ಅಸ್ಕರ್ ಅಲಿ ಮತ್ತು ಆತನ ತಂದೆ ಮಾತ್ರವೇ ಮನೆಯಲ್ಲಿದ್ದರು. ಅಸ್ಕರ್ ಅಲಿಯ ಎದೆ ಮತ್ತು ಕಾಲಿಗೆ ಗಂಭೀರ ಗಾಯ ಉಂಟಾಗಿದೆ. ಆತನ ಕೈಯ ಬೆರಳೊಂದು ಬೇರ್ಪಟ್ಟಿದೆ. ಗಂಭೀರ ಗಾಯಗೊಂಡ ಆತನನ್ನು ಕಲ್ಪೆಟ್ಟಾದ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿದೆ. ಆದರೆ ಈ ದಾಳಿ ಕುರಿತಾದ ತನಿಖೆಗೆ ಆತ ಸರಿಯಾಗಿ ಸಹಕರಿಸುತ್ತಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.
ಕಾಸರಗೋಡಿನ ಚಿನ್ನ ಕಳ್ಳಸಾಗಾಟ ತಂಡದ ಸಹಚರನಾಗಿ ಅಸ್ಕರ್ ಅಲಿ ಕಾರ್ಯಾವೆಸಗುತ್ತಿದ್ದನೆಂಬ ಸ್ಪಷ್ಟ ಮಾಹಿತಿಯೂ ಪೊಲೀಸರಿಗೆ ಲಭಿಸಿದೆ. ಆದ್ದರಿಂದಾಗಿ ಅದರ ತನಿಖೆಯನ್ನು ಕಲ್ಪೆಟ್ಟಾ ಪೊಲೀಸರು ಕಾಸರಗೋಡಿಗೂ ವಿಸ್ತರಿಸಿದ್ದಾರೆ.
ಕಾಸರಗೋಡಿನ ಚಿನ್ನ ಕಳ್ಳಸಾಗಾಟ ದಂಧೆಯವರಿಗಾಗಿ ವಿದೇಶದಿಂದ ಇತ್ತೀಚೆಗೆ ಕಲ್ಲಿಕೋಟೆ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ೨೨ ಲಕ್ಷರೂ. ಮೌಲ್ಯದ ಚಿನ್ನ ಸಾಗಿಸಲಾಗಿತ್ತೆಂದೂ ಅದನ್ನು ಅಸ್ಕರ್ ಅಲಿ ಲಪಟಾಯಿ ಸಿದ್ದನೆಂದು ಆರೋಪಿಸಲಾಗಿದೆ. ಅದಕ್ಕೆ ಪ್ರತೀಕಾರ ಎಂಬಂತೆ ಅಕ್ರಮಿಗಳು ಆತನ ಮೇಲೆ ಈ ದಾಳಿ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಅಸ್ಕರ್‌ನ ಮೇಲೆ ಕಾಪಾ ಪ್ರಕಾರದ ಕಾನೂನು ಹೇರಿ ಆತನನ್ನು ಪೊಲೀಸರು ಇತ್ತೀಚೆಗೆ ಬಂಧಿಸಿ ಜೈಲಿನಲ್ಲಿ ಕೂಡಿಹಾಕಲಾಗಿತ್ತು. ಬಳಿಕ ಆತ ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಗೊಂಡಿದ್ದನು. ಚಿನ್ನ ಕಳ್ಳಸಾಗಾಟಕ್ಕೆ ಸಂಬಂಧಿಸಿ ಇತ್ತೀಚೆಗೆ ರಾಮನಾಟ್ಟುಂಗರದಲ್ಲಿ ವಾಹನ ಅಪಘಾತವೊಂದು ನಡೆದಿತ್ತು. ಅದರಲ್ಲಿ ಐದು ಮಂದಿ ಸಾವನ್ನಪ್ಪಿದ್ದರು. ಆ ಪ್ರಕರಣದಲ್ಲ್ಲೂ ಅಸ್ಕರ್ ಅಲಿ ಆರೋಪಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.