ಮೂವರು ಸಹೋದರಿಯರು ಸೇರಿದಂತೆ ಐವರ ಪ್ರಾಣ ಅಪಹರಿಸಿದ ದಾರುಣ ಘಟನೆ: ಮರಣ ನಡೆದ ಮನೆಗೆ ಆಟೋ ರಿಕ್ಷಾದಲ್ಲಿ ತೆರಳುವಾಗ ನಡೆದ ಭೀಕರ ಅಪಘಾತ; ಬಸ್ ವಶಕ್ಕೆ, ಚಾಲಕ ಸೆರೆ
ಬದಿಯಡ್ಕ: ಬದಿಯಡ್ಕ ಸಮೀಪದ ಪಳ್ಳತ್ತಡ್ಕದಲ್ಲಿ ನಿನ್ನೆ ಸಂಜೆ ಭೀಕರ ವಾಹನ ಅಪಘಾತ ಸಂಭವಿಸಿದೆ. ಇದರಲ್ಲಿ ಮೂವರು ಸಹೋದರಿಯರೂ ಸೇರಿದಂತೆ ಐದು ಮಂದಿ ಸಾವನ್ನಪ್ಪಿದ್ದಾರೆ. ಈ ಐವರು ಮರಣ ನಡೆದ ಸಂಬಂಧಿಕ ರೋರ್ವರ ಮನೆಗೆ ಆಟೋ ರಿಕ್ಷಾದಲ್ಲಿ ಹೋಗುತ್ತಿದ್ದ ವೇಳೆ ಪಳ್ಳತ್ತಡ್ಕಕ್ಕೆ ಸಮೀಪದ ಚೆರ್ಕಳ-ಕಲ್ಲಕಟ್ಟ ರಾಜ್ಯ ಹೆದ್ದಾರಿಯ ಎಸ್ ತಿರುವಿನಲ್ಲಿ ಆಟೋ ರಿಕ್ಷಕ್ಕೆ ಖಾಸಗಿ ಸ್ಕೂಲ್ ಬಸ್ ಢಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ.
ಈ ಅಪಘಾತದಲ್ಲಿ ಆಟೋ ರಿಕ್ಷಾ ಚಾಲಕ ಮೂಲತಃ ಮೊಗ್ರಾಲ್ ಪುತ್ತೂರು ಮೊಗರು ಎರಿಯಾಲ್ ಫಾತಿಮಾ ಕಾಂಪೌಂಡ್ ನಿವಾಸಿ ಹಾಗೂ ಈಗ ಕಾಸರಗೋಡು ತಾಯಲಂಗಾಡಿಯಲ್ಲಿ ವಾಸಿಸುತ್ತಿದ್ದ ಎ.ಎಸ್. ಅಬ್ದುಲ್ ರೌಫ್ (೬೪), ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಮೊಗರಿನ ಉಸ್ಮಾನ್ ಎಂಬವರ ಪತ್ನಿ ಬೀಫಾತಿಮ್ಮ (೫೮), ಮೊಗ್ರಾಲ್ ಪುತ್ತೂರು ಕಡವತ್ತ್ ನ ಇಸ್ಮಾಯಿಲ್ ಎಂಬವರ ಪತ್ನಿ ಉಮ್ಮಾಲಿಮ್ಮ (೫೫), ಇವರ ಸಹೋದರಿಯರಾದ ಮೊಗ್ರಾಲ್ ಪುತ್ತೂರು ಬಳ್ಳೂರಿನ ಅಬ್ಬಾಸ್ ಎಂಬವರ ಪತ್ನಿ ನಬೀಸ (೫೦), ಇವರ ಚಿಕ್ಕಪ್ಪ ಬಳ್ಳೂರು ದೇಪಡ್ಪಿನ ಶೇಖ್ ಅಲಿ ಎಂಬವರ ಪತ್ನಿ ಬೀಫಾತಿಮ್ಮ (೭೨) ಎಂಬವರು ಈ ಅಪಘಾತದಲ್ಲಿ ಸಾವನ್ನಪ್ಪಿದ ದುರ್ದೈವಿಗಳಾಗಿದ್ದಾರೆ.
ಅಪಘಾತದಲ್ಲಿ ಮೃತಪಟ್ಟ ಅಬ್ದುಲ್ ರೌಫ್ ಮೊಗರಿನ ಅಬೂಬಕ್ಕರ್ ಹಾಜಿ-ಖದೀಜ ದಂಪತಿ ಪುತ್ರನಾಗಿದ್ದಾರೆ. ಇವರು ಪತ್ನಿ ರಮ್ಲಾ, ಮಕ್ಕಳಾದ ರಯೀಸ್, ರಹನಾ, ರೈಫ, ಸಹೋದರರಾದ ಬಷೀರ್, ಶುಕೂರ್, ಮೂಸ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ಇದೇ ಅಪಘಾತದಲ್ಲಿ ಸಾವನ್ನಪ್ಪಿದ ಮೊಗರಿನ ಬೀಫಾತಿಮ ಮಕ್ಕಳಾದ ಮುಮ್ತಾಜ್, ಮುನೀರ, ಮುಬಾಶಿರ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ಮೃತ ಉಮ್ಮಾಲಿಮ್ಮ ಮಕ್ಕಳಾದ ಸನ, ಅಜರುದ್ದೀನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ನಬೀಸ ಮಕ್ಕಳಾದ ಮೊಹಮ್ಮದ್ ಮುರ್ತಳ, ಫಾಯೀಸ, ಫಮೀಸ, ನಿಶಾನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ದೇಪಡ್ಪಿನ ಬೀಫಾತಿಮ್ಮ ಮಕ್ಕಳಾದ ರೌಫ್, ಹ್ಯಾರೀಸ್, ಅನಸ್, ತಸ್ರೀಬ, ರುಖಿಯ, ಮಸೀದ, ಅತೀಖ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ಮಾನ್ಯದ ಖಾಸಗಿ ಶಾಲೆಯೊಂದರ ಬಸ್ ನಿನ್ನೆ ಸಂಜೆ ವಿದ್ಯಾರ್ಥಿಗಳನ್ನು ಅವರ ಮನೆಪಕ್ಕ ಇಳಿಸಿ ಹಿಂತಿರುಗುತ್ತಿದ್ದ ದಾರಿ ಮಧ್ಯೆ ಪಳ್ಳತ್ತಡ್ಕ ತಿರುವಿನಲ್ಲಿ ಆಟೋ ರಿಕ್ಷಾಕ್ಕೆ ಢಿಕ್ಕಿ ಹೊಡೆದು ಈ ಭೀಕರ ಅಪಘಾತ ಸಂಭವಿಸಿದೆ. ಢಿಕ್ಕಿಯ ರಭಸಕ್ಕೆ ಆಟೋರಿಕ್ಷಾ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಊರವರು ಮತ್ತು ಪೊಲೀಸರು ಸೇರಿ ತಕ್ಷಣ ಆಟೋ ರಿಕ್ಷಾದಲ್ಲಿದ್ದವರನ್ನೆಲ್ಲಾ ಆಂಬುಲೆನ್ಸ್ ಇತ್ಯಾದಿ ವಾಹನಗಳಲ್ಲಿ ಆಸ್ಪತ್ರೆಗೆ ಸಾಗಿಸಿದರೂ ಈ ಐವರ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.
ಅಪಘಾತ ನಡೆದ ಸ್ಥಳಕ್ಕೆ ಆ ವೇಳೆ ಭಾರೀ ಜನಪ್ರವಾಹವೇ ಹರಿದುಬರ ತೊಡಗಿತು. ಢಿಕ್ಕಿ ಹೊಡೆದ ಶಾಲಾ ಬಸ್‌ನ್ನು ಬದಿಯಡ್ಕ ಪೊಲೀಸರು ವಶಕ್ಕೆ ತೆಗೆದು ಠಾಣೆಗೆ ಸಾಗಿಸಿದ್ದಾರೆ. ಅದರ ಚಾಲಕ ಕುಂಟಿಕಾನ ನಿವಾಸಿ ಜೋನ್ ಡಿ’ಸೋಜಾ ಅಲಿಯಾಸ್ ಜೆರಿ (೫೬) ಎಂಬಾತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿದ್ದಾರೆ. ಅಪಘಾತದಲ್ಲಿ ಐವರು ಪ್ರಾಣ ಕಳೆದುಕೊಂಡಿರುವುದು ನಾಡನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ.