ವಿವಿಧ ಬೇಡಿಕೆ ಮುಂದಿಟ್ಟು ಪುತ್ತಿಗೆ ಕೃಷಿಭವನಕ್ಕೆ ಕಿಸಾನ್ ಸೇನೆ ಮಾರ್ಚ್ 10ರಂದು
ಕುಂಬಳೆ: ಹೊಳೆಯಿಂದ ಕೃಷಿ ಅಗತ್ಯಕ್ಕೆ ನೀರು ಉಪಯೋಗಿಸುವುದಕ್ಕೆ ನಿಯಂತ್ರಣ ಏರ್ಪಡಿಸಿ ಕೃಷಿ ಅಗತ್ಯಕ್ಕಿರುವ ಉಚಿತ ವಿದ್ಯುತ್ ವಿತರಣೆ ನಿಲ್ಲಿಸುವ ಯತ್ನ ಕೃಷಿಕರಿಗೆ ಒಡ್ಡುವ ಸವಾಲು ಎಂದು, ಈ ರೀತಿಯ ರೈತದ್ರೋಹ ನಿಲುವುಗಳನ್ನು ಮುಂದುವರಿಸಿದರೆ ತೀವ್ರ ಮುಷ್ಕರಕ್ಕೆ ನೇತೃತ್ವ ನೀಡುವುದಾಗಿ ಕಿಸಾನ್ ಸೇನೆ ಪುತ್ತಿಗೆ ಪಂಚಾಯತ್ ಪದಾಧಿಕಾರಿಗಳು ಕುಂಬಳೆಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
200ಕ್ಕೂ ಅಧಿಕ ಕೃಷಿಕರಿಗೆ ಉಚಿತವಾಗಿ ವಿದ್ಯುತ್ ನೀಡುತ್ತಿರುವು ದನ್ನು ಹೊರತುಪಡಿಸಿದ ಪುತ್ತಿಗೆ ಕೃಷಿಭವನ ಕ್ರಮದ ವಿರುದ್ಧ ಕಿಸಾನ್ ಸೇನೆ ಪುತ್ತಿಗೆ ಪಂಚಾಯತ್ ಸಮಿತಿ ನೇತೃತ್ವದಲ್ಲಿ ಈ ತಿಂಗಳ ೧೦ರಂದು ಬೆಳಿಗ್ಗೆ 10.30ಕ್ಕೆ ಕಟ್ಟತ್ತಡ್ಕದಿಂದ ಪುತ್ತಿಗೆ ಕೃಷಿಭವನಕ್ಕೆ ಮಾರ್ಚ್ ನಡೆಸಲು ತೀರ್ಮಾನಿಸಲಾಗಿದೆ.
ಮೋಟಾರು ಉಪಯೋಗಿಸಿ ಹೊಳೆಯಿಂದ ನೀರು ಉಪಯೋಗಿಸ ಬಾರದು, ಕೊಳವೆ ಬಾವಿಯ ನೀರನ್ನು ಕೃಷಿಗೆ ಉಪಯೋಗಿಸಿದರೆ ವಿದ್ಯುತ್ ಉಚಿತವಾಗಿ ಲಭಿಸದು ಎಂಬ ತೀರ್ಮಾನ ಕೃಷಿಕರ ಪಾಲಿಗೆ ದೊಡ್ಡ ಹೊಡೆತವಾಗಿದೆ. ಕೃಷಿಕರ ವಿದ್ಯುತ್ ಬಾಕಿ ಮೊತ್ತವನ್ನು ಕೃಷಿಭವನ ಪಾವತಿಸಬೇಕು, ಬಾಕಿ ಮೊತ್ತ ಪಾವತಿಸಿ ಉಚಿತ ವಿದ್ಯುತ್ ಸಂಪರ್ಕ ನೀಡಬೇಕು, ಹೊಳೆಯಿಂದ ಮೋಟಾರ್ ಉಪಯೋಗಿಸಿ ನೀರು ತೆಗೆಯಲು ಅನುಮತಿ ನೀಡಬೇಕು ಎಂಬೀ ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನಾ ಮಾರ್ಚ್ ನಡೆಸುವುದಾಗಿ ಸುದ್ಧಿಗೋಷ್ಠಿಯಲ್ಲಿ ಪದಾಧಿಕಾರಿಗಳು ತಿಳಿಸಿದ್ದಾರೆ. ಕೃಷಿಕರ ಸಮಸ್ಯೆಯನ್ನು ಪರಿಹರಿಸಲು ಜಿಲ್ಲೆಯ ಶಾಸಕರು, ಕೃಷಿ ಇಲಾಖೆ ಸಚಿವರು ತುರ್ತಾಗಿ ಮಧ್ಯ ಪ್ರವೇಶಿಸಬೇಕೆಂದು ಕಿಸಾನ್ ಸೇನೆ ಪದಾಧಿಕಾರಿಗಳು ಆಗ್ರಹಿಸಿದ್ದಾರೆ. ಸುದ್ಧಿಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ಶುಕೂರ್ ಕಾಣಾಜೆ, ಪುತ್ತಿಗೆ ಪಂಚಾಯತ್ ಸಮಿತಿ ಅಧ್ಯಕ್ಷ ಪಿ. ಅಬ್ದುಲ್ಲ ಕಂಡತ್ತಿಲ್, ಪ್ರಧಾನ ಕಾರ್ಯದರ್ಶಿ ಸುರೇಶ್ ಪಿ.ಎ. ಅಡ್ಕತ್ತೊಟ್ಟಿ, ಉಪಾಧ್ಯಕ್ಷ ಬಾಲಸುಬ್ರಹ್ಮಣ್ಯ ಭಟ್ ಚಕ್ಕಣಿಕೆ, ಜೊತೆ ಕಾರ್ಯದರ್ಶಿ ಪ್ರಸಾದ್ ಕಕ್ಕೆಪ್ಪಾಡಿ ಭಾಗವಹಿಸಿದರು.