ಶಬರಿಮಲೆ: ಅರವಣ ಪ್ರಸಾದದಲ್ಲಿ ಕೀಟನಾಶಕ ಅಂಶವಿಲ್ಲ ಸೇವನೆಗೆ ಯೋಗ್ಯ- ಕೇಂದ್ರ ಆಹಾರ ಪ್ರಾಧಿಕಾರ
ತಿರುವನಂತಪುರ: ವಿಶ್ವವಿಖ್ಯಾತ ಧಾರ್ಮಿಕ ಕ್ಷೇತ್ರ ಶಬರಿಮಲೆಯಲ್ಲಿ ವಿತರಿಸಲಾಗುವ ಅರವಣ ಪಾಯಸ (ಪ್ರಸಾದ)ದಲ್ಲಿ ಕೀಟನಾಶಕದ ಅಂಶವಿಲ್ಲವೆಂದೂ, ಈ ಪ್ರಸಾದ ಸೇವನೆಗೆ ಯೋಗ್ಯವಾಗಿದೆ ಎಂದು ಕೇಂದ್ರ ಆಹಾರ ಸುರಕ್ಷಾ ಪ್ರಾಧಿಕಾರ ಸುಪ್ರಿಂಕೋರ್ಟ್‌ಗೆ ವರದಿ ಸಲ್ಲಿಸಿದೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ದಾಸ್ತಾನು ಮಾಡಲಾಗಿ ರುವ ಅರವಣ ಪ್ರಸಾದದ ವಿತರಣೆಗೆ ನ್ಯಾಯಾಲಯದ ಅನುಮತಿ ಕೋರುವು ದಾಗಿ ತಿರುವಿದಾಂಕೂರ್ ದೇವಸ್ವಂ (ಮುಜರಾಯಿ) ಮಂಡಳಿ ಅಧ್ಯಕ್ಷ ಕೆ. ಅನಂತಗೋಪನ್ ತಿಳಿಸಿದ್ದಾರೆ.
ಅರವಣ ಪ್ರಸಾದದಲ್ಲಿ ಕೀಟನಾಶಕ ಮಿಶ್ರಿತ ಏಲಕ್ಕಿ ಬಳಸಲಾಗಿದೆ ಎನ್ನುವ ದೂರು ಈ ಹಿಂದೆ ಕೇಳಿ ಬಂದಿತ್ತು. ಆದರೆ ಮಾದರಿ ಪರೀಕ್ಷೆಯಲ್ಲಿ ಅರವಣ ಪ್ರಸಾದದಲ್ಲಿ ಕೀಟನಾಶಕ ಪತ್ತೆಯಾಗಿಲ್ಲವೆಂದು ತಿಳಿಸಲಾಗಿದೆ.
ಅರವಣ ಪ್ರಸಾದದಲ್ಲಿ ಕೀಟನಾಶಕ ಅಂಶ ಪತ್ತೆಯಾಗಿದೆ ಎಂಬ ಆರೋಪ ಎದ್ದು ಬಂದ ಈ ಕಾರಣದಿಂದಾಗಿ ಕಳೆದ ಶಬರಿಮಲೆ ತೀರ್ಥಾಟನಾ ಋತುವಿನಲ್ಲಿ ದಾಸ್ತಾನು ಇರಿಸಲಾಗಿದ್ದ ಆರು ಕೋಟಿ ರೂ. ಮೌಲ್ಯದ ಅರವಣ ಪಾಯಸದ ವಿತರಣೆಯನ್ನು ದೇವಸ್ವಂ ಮಂಡಳಿ ನಿಲುಗಡೆಗೊಳಿಸಿತ್ತು. ಅದು ಮಂಡಳಿಗೆ ಭಾರೀ ನಷ್ಟ ಉಂಟುಮಾಡಿತ್ತು. ಅದರ ಬದಲು ಏಲಕ್ಕಿ ಬಳಸದ ಅರವಣ ಪ್ರಸಾದ ತಯಾರಿಸಿ ಬಳಿಕ ಭಕ್ತಚರಿಗೆ ವಿತರಿಸಲಾಗಿತ್ತು.