ಶಾಲಾ ವಾಹನದಿಂದ ಇಳಿದ ನರ್ಸರಿ ವಿದ್ಯಾರ್ಥಿನಿ ಅದೇ ವಾಹನ ಢಿಕ್ಕಿ ಹೊಡೆದು ದಾರುಣ ಮೃತ್ಯು

ಕಾಸರಗೋಡು: ಶಾಲೆಯಿಂದ ಶಾಲಾ ವಾಹನದಲ್ಲಿ ಮನೆ ಬಳಿ ಬಂದಿಳಿದ ನರ್ಸರಿ ಶಾಲೆಯ ವಿದ್ಯಾರ್ಥಿನಿ ಅದೇ ವಾಹನ ಢಿಕ್ಕಿ ಹೊಡೆದು ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.

ಚೌಕಿ ಸಮೀಪದ ಪೆರಿಯಡ್ಕ ಮರ್ಹಬಾ ಹೌಸ್‌ನ ಮೊಹಮ್ಮದ್ ಝುಬೈರ್-ಶರ್ಬಾನಾ ದಂಪತಿಯ ಪುತ್ರಿ ಆಯಿಷಾ ಸೋಯಾ (೪) ಸಾವನ್ನಪ್ಪಿದ ದುರ್ದೈವಿ ಬಾಲಕಿ.  ಈಕೆ ಕಾಸರಗೋಡು ನೆಲ್ಲಿಕುಂಜೆ ತಂಙಳ್ ಉಪ್ಪಾಪ ನರ್ಸರಿ ಶಾಲೆಯ ನರ್ಸರಿ ವಿದ್ಯಾರ್ಥಿನಿಯಾಗಿದ್ದಾಳೆ. ನಿನ್ನೆ ಮಧ್ಯಾಹ್ನ  ೨ ಗಂಟೆಗೆ ಶಾಲೆ ಬಿಟ್ಟು ಶಾಲಾ ವಾಹನದಲ್ಲಿ  ಮನೆ ಬಳಿ ಬಂದಿಳಿದಾಗ   ಚಾಲಕ  ವಾಹನವನ್ನು ಹಿಂದಕ್ಕೆ ಸರಿಸಿದಾಗ  ಅದು ಆಕೆಗೆ ಢಿಕ್ಕಿ  ಹೊಡೆದಿದೆ. ಅದನ್ನು ಕಂಡು ಅಲ್ಲೇ ಪಕ್ಕದ ಕೈಗಾರಿಕಾ ಘಟಕದ ಮಹಿಳೆಯರು ಸೇರಿ ಬಾಲಕಿಯನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ಕೊಡಿಸಿದರೂ  ಅಷ್ಟರಲ್ಲಿ ಬಾಲಕಿಯ ಪ್ರಾಣಪಕ್ಷಿ ಹಾರಿಹೋಗಿತ್ತು.  ಮೃತ ಬಾಲಕಿ ಹೆತ್ತವರ ಹೊರತಾಗಿ ಸಹೋದರಿ ಯರಾದ ದಿಯಾ, ಮಹ್‌ರ್ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾಳೆ. ಬಾಲಕಿಯ ಸಾವು ಇಡೀ ಊರನ್ನೇ ಶೋಕಸಾಗರದಲ್ಲಿ ಮುಳುಗುವಂತೆ ಮಾಡಿದೆ.

ಈ ಘಟನೆಗೆ ಸಂಬಂಧಿಸಿ ಶಾಲಾ ವಾಹನ ಚಾಲಕ ತಳಂಗರೆ ಬಾಂಗೋಡಿನ ಅಲ್ತ್ತಾಫ್ ಅಲಿ ಯಾಸ್ ಅಬ್ದುಲ್ ರಹ್ಮಾನ್ ವಿರುದ್ಧ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಆತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

You cannot copy contents of this page