ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಕಟ್ಟಡ ನಿರ್ಮಾಣ ಕಾಯ್ದೆ ಉಲ್ಲಂಘನೆ ವ್ಯಾಪಕ: ವಿಜಿಲೆನ್ಸ್‌ನಿಂದ ತನಿಖೆ
ಕಾಸರಗೋಡು: ಸರಕಾರ ಜನರಿಂದ ಶುಲ್ಕ ವಸೂಲು ಮಾಡಲು ಕಾನೂನು ಕ್ರಮಗಳನ್ನು ಕಡ್ಡಾಯಗೊಳಿಸುತ್ತಿರುವಾಗಲೇ ಸರಕಾರದ ಮರೆಯಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳು ಕೊಳ್ಳೆ, ಕಾನೂನು ಉಲ್ಲಂಘನೆ ನಡೆಸುತ್ತಿರುವುದು ವ್ಯಾಪಕಗೊಂಡಿದೆ. ಪೊಲೀಸ್‌ನ ವಿಜಿಲೆನ್ಸ್ ವಿಭಾಗ ಸ್ಥಳೀಯಾಡಳಿತ ಸಂಸ್ಥೆಗಳ ಕಾನೂನು ವಿರುದ್ಧ ಚಟುವಟಿಕೆಗಳು ಹಾಗೂ ಭ್ರಷ್ಟಾಚಾರಗಳನ್ನು ಪತ್ತೆಹಚ್ಚಿದೆ.
ಕಟ್ಟಡಗಳು ಹಾಗೂ ವ್ಯಾಪಾರ ಸಂಸ್ಥೆಗಳನ್ನು ನಿರ್ಮಿಸಲು ಸರಿಯಾದ ನಿಯಮ, ಕಾಯ್ದೆ, ವ್ಯವಸ್ಥೆಗಳನ್ನು ಸರಕಾರ ಕಡ್ಡಾಯಗೊಳಿಸುತ್ತಿರುವಾಗಲೇ ಜಿಲ್ಲೆಯ ಹಲವು ಸ್ಥಳೀಯಾಡಳಿತ ಸಂಸ್ಥೆಗಳು ಅದನ್ನು ಉಲ್ಲಂಘಿಸುತ್ತಿರುವುದಾಗಿ ವಿಜಿಲೆನ್ಸ್ ಪತ್ತೆಹಚ್ಚಿದೆ. ಇಂತಹ ಚಟುವಟಿಕೆಗಳು ನಾಡಿನ ಸುಗಮ ಪುರೋಗತಿ ಹಾಗೂ ಭವಿಷ್ಯದ ಅಗತ್ಯಗಳಿಗೆ ಅಡ್ಡಿ ಸೃಷ್ಟಿಸುತ್ತಿದೆ ಎಂಬ ಮುನ್ನೆಚ್ಚರಿಕೆಯನ್ನು ನೀಡಲಾಗಿದೆ. ಚೆಂಗಳಂ, ಮಧೂರು, ತೃಕ್ಕರಿಪುರ ಎಂಬೀ ಪಂಚಾಯತ್‌ಗಳಲ್ಲಿ ವಿಜಿಲೆನ್ಸ್ ತಂಡ ತಪಾಸಣೆ ನಡೆಸಿದೆ.
ಚೆರ್ಕಳದಲ್ಲಿ ಬಹು ಅಂತಸ್ತಿನ ಕಟ್ಟಡಗಳನ್ನು ಲೋಕೋಪಯೋಗಿ ಇಲಾಖೆಯ ರಸ್ತೆಯ ಸ್ಥಳಗಳಲ್ಲಿ ನಿರ್ಮಿಸಲಾಗಿದೆ ಎಂದು ಪತ್ತೆಹಚ್ಚಲಾಗಿದೆ. ಪಂಚಾಯತ್ ಲಿಖಿತ ಅನುಮತಿ ಇಲ್ಲದೆ ಕಟ್ಟಡ ನಿರ್ಮಿಸಲಾಗಿದೆ ಎಂದೂ ಆದರೆ ಅದಕ್ಕೆ ಪಂಚಾಯತ್ ಆಡಳಿತಗಾರರು ಬಾಯಿ ಮಾತಿನಲ್ಲಿ ಅನುಮತಿ ನೀಡಿದ್ದಾರೆಂದು ಸಂಶಯಿಸಲಾಗುತ್ತಿದೆ. ಇಂತಹ ಅನಧಿಕೃತ ಕಟ್ಟಡಗಳ ವಿರುದ್ಧ ಪಂಚಾಯತ್ ಹಾಗೂ ಲೋಕೋಪಯೋಗಿ ಇಲಾಖೆ ಕಾನೂನು ಕ್ರಮ ಕೈಗೊಳ್ಳದಿರುವುದರಿಂದ ಈ ಸಂಶಯ ಬಲಗೊಂಡಿದೆಯೆಂದು ಅಧಿಕಾರಿಗಳು ತಿಳಿಸುತ್ತಿದ್ದಾರೆ. ಹಲವು ವ್ಯಾಪಾರ ಸಂಸ್ಥೆಗಳು, ಪಾರ್ಕಿಂಗ್ ಸ್ಥಳದಲ್ಲಿ ಶೆಡ್ ನಿರ್ಮಿಸಿ ವ್ಯಾಪಾರ ನಡೆಸುತ್ತಿದ್ದು, ವಾಹನಗಳನ್ನು ರಸ್ತೆಗಳಲ್ಲೇ ನಿಲ್ಲಿಸಿ ಸಂಚಾರಕ್ಕೆ ಅಡ್ಡಿ ಪಡಿಸುತ್ತಿದ್ದರೂ ಅದರ ವಿರುದ್ಧ ಕ್ರಮ ಕೈಗೊಳ್ಳದಿರುವುದು ಕಾನೂನು ಉಲ್ಲಂಘನೆ ಎಲ್ಲರ ಭಾಗದಿಂದಲೂ ಉಂಟಾಗಿದೆ ಎಂಬ ಸೂಚನೆ ನೀಡಿದೆ.
ಪಂಚಾಯತ್‌ಗಳು ಸರಕಾರದ ರೀತಿಯಲ್ಲಿ ಆರ್ಥಿಕ ಸಂದಿಗ್ಧತೆ ಬಗ್ಗೆ ತಿಳಿಸುತ್ತಿರುವಾಗ ಪಂಚಾಯತ್‌ಗೆ ಕಾನೂನು ರೀತಿಯಲ್ಲಿ ಲಭಿಸಬೇಕಾದ ಆದಾಯವನ್ನೂ ಈ ರೀತಿಯಲ್ಲಿ ಲಪಟಾಯಿಸುತ್ತಿರುವುದಾಗಿ ಆರೋಪಗಳುಂಟಾಗಿದೆ. ಡಿವೈಎಸ್‌ಪಿ ವಿ.ಕೆ. ವಿಶ್ವಂಭರನ್ ನಾಯರ್, ಇನ್ಸ್‌ಪೆಕ್ಟರ್ ಕೆ. ಸುನುಮೋನ್, ಪಿ. ಸುನಿಲ್ ಕುಮಾರ್ ಎಂಬಿವರು ತಪಾಸಣೆಗೆ ನೇತೃತ್ವ ನೀಡಿದರು.