ಓಣಂ: ಅಬಕಾರಿ ಇಲಾಖೆಯಿಂದ ಸೈಕಲ್ ಎನ್ಫೋರ್ಸ್ಮೆಂಟ್ ಡ್ರೈವ್ ಆರಂಭ: 50.76 ಲೀ. ಕರ್ನಾಟಕ ಮದ್ಯ ವಶ
ಕಾಸರಗೋಡು: ಓಣಂ ಹಬ್ಬ ಇನ್ನೇನು ಸಮೀಪಿಸುತ್ತಿರುವಂತೆಯೇ ಈ ಸಂದರ್ಭದಲ್ಲಿ ಜಿಲ್ಲೆಗೆ ಕಳ್ಳಭಟ್ಟಿ ಸಾರಾಯಿ, ನಕಲಿ ಮದ್ಯ, ಸ್ಪಿರಿಟ್, ಹೊರ ರಾಜ್ಯಗಳಿಂದ ಭಾರೀ ಪ್ರಮಾಣದಲ್ಲಿ ವಿದೇಶ ಮದ್ಯ ಹಾಗೂ ಮಾದಕ ವಸ್ತುಗಳು ಹರಿದು ಬರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಅದನ್ನು ತಡೆಗಟ್ಟಲು ಹಾಗೂ ಪತ್ತೆಹಚ್ಚಲು ಅಬಕಾರಿ ಇಲಾಖೆ ಜಿಲ್ಲೆಯಲ್ಲಿ ಸ್ಪೆಷಲ್ ಎನ್ಫೋರ್ಸ್ಮೆಂಟ್ ಡ್ರೈವ್ ಕಾರ್ಯಾಚರಣೆ ಆರಂಭಿಸಿದೆ.
ಇದರಂತೆ, ಕಾಸರಗೋಡು ಅಬಕಾರಿ ಗುಪ್ತಚರ ವಿಭಾಗದ ಪ್ರಿವೆಂಟಿವ್ ಆಫೀಸರ್ ಬಿಜೋಯ್ ಇ.ಕೆ.ರಿಗೆ ಲಭಿಸಿದ ಗುಪ್ತ ಮಾಹಿತಿಯಂತೆ ಅಬಕಾರಿ ತಂಡ ನಿನ್ನೆ ಕಾಸರಗೋಡು ನೆಲ್ಲಿಕುಂಜೆಗೆ ಸಮೀಪದ ಬಂಗಾರಗುಡ್ಡೆ ರಸ್ತೆ ಪರಿಸರದ ಜನವಾಸವಿಲ್ಲದ ಹಿತ್ತಿಲಲ್ಲಿ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ 80.76 ಲೀಟರ್ (180 ಎಂ.ಎಲ್ನ (282 ಪ್ಯಾಕೆಟ್) ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಆದರೆ ಅಲ್ಲಿ ಬಚ್ಚಿಟ್ಟ ವ್ಯಕ್ತಿಗಳ ಬಗ್ಗೆ ಅಬಕಾರಿ ತಂಡಕ್ಕೆ ಯಾವುದೇ ರೀತಿಯ ಮಾಹಿತಿ ಲಭಿಸಿಲ್ಲ. ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿದೆ.
ಕಾಸರಗೋಡು ಅಬಕಾರಿ ರೇಂಜ್ ಕಚೇರಿಯ ಅಸಿಸ್ಟೆಂಟ್ ಎಕ್ಸೈಸ್ ಆಫೀಸರ್ (ಗ್ರೇಡ್) ರಾಜೀವನ್ ಎ.ವಿ.ಯವರ ನೇತೃತ್ವದಲ್ಲಿ ಪ್ರಿವೆಂಟಿವ್ ಆಫೀಸರ್ಗಳಾದ ಉಣ್ಣಿಕೃಷ್ಣನ್ ಕೆ., ರಂಜಿತ್ ಕೆ.ವಿ., ಸಿಇಒ ಚಾರ್ಲ್ಸ್ ಜೋಸ್ ಮತ್ತು ಕಣ್ಣನ್ ಎಂಬಿವರನ್ನೊಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿದೆ. ಜಿಲ್ಲೆಯ ಎಲ್ಲಾ ಗಡಿ ಪ್ರದೇಶಗಳಲ್ಲೂ ಅಬಕಾರಿ ಇಲಾಖೆ ತೀವ್ರ ನಿಗಾ ಇರಿಸಿದೆ. ಹೊರ ರಾಜ್ಯಗಳಿಂದ ಕೇರಳಕ್ಕೆ ಬರುವ ಎಲ್ಲಾ ವಾಹನಗಳನ್ನೂ ಅಬಕಾರಿ ಇಲಾಖೆಯ ವಿಶೇಷ ತಂಡ ಬಿಗಿ ತಪಾಸಣೆಗೊಳಪಡಿಸಿದ ಬಳಿಕವಷ್ಟೇ ಅವುಗಳನ್ನು ಜಿಲ್ಲೆಯೊಳಗೆ ಬಿಡಲಾಗುತ್ತಿದೆ.