ತಾಲೂಕು ಆಸ್ಪತ್ರೆ ಅಭಿವೃದ್ಧಿ ಬುಡಮೇಲುಗೊಳಿಸಲು ಸಂಚು: ೧೮ರಂದು ಮಂಗಲ್ಪಾಡಿ ಜನಕೀಯ ವೇದಿಕೆಯಿಂದ ಸೂಚನಾ ಧರಣಿ
ಕುಂಬಳೆ: ಉಪ್ಪಳ ಮಂಗಲ್ಪಾಡಿ ಯಲ್ಲಿರುವ ಮಂಜೇಶ್ವರ ತಾಲೂಕು ಆಸ್ಪತ್ರೆಯ ಅಭಿವೃದ್ಧಿಯನ್ನು ಬುಡಮೇ ಲುಗೊಳಿಸಲು ಕೆಲವು ಕೇಂದ್ರಗಳು ನಡೆಸುತ್ತಿರುವ ಯತ್ನವನ್ನು ವಿರೋಧಿಸಿ ಮಂಗಲ್ಪಾಡಿ ಜನಪರ ವೇದಿಕೆ ಪ್ರತಿಭ ಟನೆ ತೀವ್ರಗೊಳಿಸಲು ನಿರ್ಧರಿಸಿದೆ. ಇದರ ಅಂಗವಾಗಿ ಅಕ್ಟೋಬರ್ ೧೮ರಂದು ಬೆಳಿಗ್ಗೆ ೯ರಿಂದ ಮಧ್ಯಾಹ್ನ ೧ ಗಂಟೆಯವರೆಗೆ ಆಸ್ಪತ್ರೆ ಎದುರು ಧರಣಿ ನಡೆಸುವುದಾಗಿ ವೇದಿಕೆಯ ಪದಾಧಿ ಕಾರಿಗಳು ಕುಂಬಳೆ ಪ್ರೆಸ್ ಫಾರ್ಮ್ನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಆಸ್ಪತ್ರೆಯ ಸಮಗ್ರ ಅಭಿವೃದ್ಧಿಯನ್ನು ಗುರಿಯಾಗಿಟ್ಟುಕೊಂಡು ವೇದಿಕೆ ಕಳೆದ ಮೂರೂವರೆ ವರ್ಷಗಳಿಂದ ಹೋರಾಟ ನಡೆಸುತ್ತಿದೆ. ೨೦೨೦ ಸೆಪ್ಟಂಬರ್ನಲ್ಲಿ ೧೯ ದಿನಗಳ ಕಾಲ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗಿತ್ತು. ಆ ವೇಳೆ ಅಂದಿನ ಕಂದಾಯ ಸಚಿವ ಇ. ಚಂದ್ರಶೇಖರನ್ ಮಧ್ಯಪ್ರವೇಶಿಸಿ ಸರಕಾರದಿಂದ ನೆರವು ನೀಡುವುದಾಗಿ ಧರಣಿ ಸಮಿತಿ ಮುಖಂಡರಿಗೆ ಭರವಸೆ ನೀಡಿದ್ದರಿಂದ ಧರಣಿ ಅಂತ್ಯಗೊಂಡಿತು. ಆದರೆ ಬಳಿಕ ಆಸ್ಪತ್ರೆಯ ಪ್ರಗತಿ ಮರೀಚಿಕೆಯಾಗಿಯೇ ಉಳಿಯಿತು.
ಇದರ ಬೆನ್ನಲ್ಲೇ ಕೆ.ಐ.ಎಫ್.ಬಿಗೆ ಸೇರಿಸಿ ಆಸ್ಪತ್ರೆಯ ನೂತನ ಕಟ್ಟಡ ನಿರ್ಮಾಣಕ್ಕೆ ೧೭ ಕೋಟಿ ರೂ.ಗಳ ಅಂದಾಜು ಪಟ್ಟಿ ಸಿದ್ಧಪಡಿಸಲಾಗಿತ್ತು. ನಂತರ ಸರಕಾರ ೧೩.೫ ಕೋಟಿ ಮಂಜೂರು ಮಾಡಿತ್ತು. ಹಳೆ ಕಟ್ಟಡ ಕೆಡವಿ ಮಣ್ಣು ಪರೀಕ್ಷೆ ನಡೆಸಿದ್ದು ಬಿಟ್ಟರೆ ಮುಂದಿನ ಕಾಮಗಾರಿ ನಡೆದಿಲ್ಲ. ನಿಧಿ ಲಭ್ಯವಾಗಿ ವರ್ಷಗಳೇ ಕಳೆದರೂ ಈ ಬಗ್ಗೆ ಜನಪ್ರತಿನಿಧಿಗಳು ಸೇರಿದಂತೆ ಅಧಿಕಾರಿಗಳಿಂದ ಸ್ಪಷ್ಟ ಮಾಹಿತಿ ಬಂದಿಲ್ಲ. ಇಲ್ಲಿಗೆ ಬರುವ ರೋಗಿಗಳಿಗೆ ಉತ್ತಮ ಚಿಕಿತ್ಸೆ ಲಭ್ಯಗೊಳಿಸಲು ಅಧಿಕಾರಿಗಳು ಅವಕಾಶ ಕಲ್ಪಿಸಿ ಕಿಪ್ಬಿ ಹಣ ಬಳಸಿಕೊಂಡು ಆಸ್ಪತ್ರೆ ಅಭಿವೃದ್ಧಿ ಪಡಿಸಬೇಕು ಎಂದು ಜನಪರ ವೇದಿಕೆ ಆಗ್ರಹಿಸಿದೆ. ಇಲ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರ (ಪಿ.ಎಚ್.ಸಿ) ಆಡಳಿತ ಮಂಡಳಿ ತಾಲೂಕು ಆಸ್ಪತ್ರೆಯಾಗಿ ರೂಪುಗೊಂಡಿದ್ದು ಬಿಟ್ಟರೆ ಕುಟುಂಬ ಆರೋಗ್ಯ ಕೇಂದ್ರದಲ್ಲಿ ಮಾತ್ರ ಚಿಕಿತ್ಸೆ ದೊರೆಯುತ್ತಿದೆ. ಜನ ಸಾಮಾ ನ್ಯರು ಖಾಸಗಿ ಆಸ್ಪತ್ರೆಗಳನ್ನೇ ಅವಲಂ ಭಿಸಬೇಕಾದ ಸ್ಥಿತಿ ಮುಂದುವರಿದಿದೆ. ಕೋವಿಡ್ ವೇಳೆ ಅಂತರ್ ರಾಜ್ಯ ಗಡಿ ಮುಚ್ಚಲ್ಪಟ್ಟಾಗ ಚಿಕಿತ್ಸೆ ದೊರೆಯದೆ ಹಲವು ಮಂದಿ ಪ್ರಾಣ ಕಳೆದುಕೊಂಡಿ ದ್ದಾರೆ ಎಂದು ಜನಪರ ವೇದಿಕೆಯ ಪದಾಧಿಕಾರಿಗಳು ಸೂಚಿಸಿದರು. ಈ ಪರಿಸ್ಥಿತಿ ಇನ್ನಾದರೂ ಬದಲಾಗಬೇಕು. ಅಧಿಕಾರಿಗಳು ಕಣ್ತೆರೆಯ ಬೇಕು ಎಂದು ಜನಕೀಯ ವೇದಿಕೆ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಜನಪರ ವೇದಿಕೆ ಅಧ್ಯಕ್ಷ ಅಬ್ದುಲ್ ಕರೀಂ ಪೂನಾ, ಸಂಚಾಲಕ ಅಬು ತಮಾಮ್, ಅಬು ರಾಯಲ್, ಸತ್ಯನ್ ಸಿ. ಉಪ್ಪಳ, ಮಹಮ್ಮದ್ ಕೈಕಂಬ, ಸಿದ್ದೀಕ್ ಕೈಕಂಬ, ಅಬ್ದುಲ್ ಅತ್ತಾರ್, ಅಶ್ರಫ್ ಎಂ., ಜೈನುದ್ದೀನ್ ಅಡ್ಕ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದರು.