ಆರೋಗ್ಯ ವಲಯದ ಅನಾಸ್ಥೆ ವಿರುದ್ಧ ಮುಸ್ಲಿಂ ಯೂತ್ ಲೀಗ್ ಡಿಎಂಒ ಕಚೇರಿ ಮಾರ್ಚ್: ಪೊಲೀಸರಿಂದ ಜಲಫಿರಂಗಿ

ಕಾಸರಗೋಡು: ಎಡರಂಗ ಸರ ಕಾರದ ಲೋಪದಿಂದಾಗಿ ಆರೋಗ್ಯ ವಲಯದಲ್ಲಿ ಮುಂದುವರಿಯುತ್ತಿರುವ ಅನಾಸ್ಥೆಯನ್ನು ಪ್ರತಿಭಟಿಸಿ ಮುಸ್ಲಿಂ ಯೂತ್ ಲೀಗ್ ರಾಜ್ಯ ಸಮಿತಿ ಆಹ್ವಾನ ಪ್ರಕಾರ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಕಾಞಂಗಾಡ್ ಡಿಎಂಒ ಕಚೇರಿಗೆ ಮಾರ್ಚ್ ನಡೆಸಲಾಯಿತು. ಮಾರ್ಚನ್ನು ಜಿಲ್ಲಾ ಆಸ್ಪತ್ರೆ ಪರಿಸರದಲ್ಲಿ ಪೊಲೀಸರು ತಡೆದರು. ಬಳಿಕ ಪೊಲೀಸ್ ಹಾಗೂ ಕಾರ್ಯಕರ್ತರ ಮಧ್ಯೆ ಘರ್ಷಣೆ ಉಂಟಾಗಿ ಪೊಲೀಸರು ಜಲಫಿರಂಗಿ ಪ್ರಯೋಗಿಸಿದರು. ಮಾರ್ಚನ್ನು ರಾಜ್ಯ ಉಪಾಧ್ಯಕ್ಷ ಅಶ್ರಫ್ ಎಡನೀರು ಉದ್ಘಾಟಿಸಿದರು. ರಾಜ್ಯ ಕಾರ್ಯದರ್ಶಿ ಫಾತಿಮ ತಹ್ಲಿಯಾ ಪ್ರಧಾನ ಭಾಷಣ ಮಾಡಿದರು. ಜಿಲ್ಲಾಧ್ಯಕ್ಷ ಅಸೀಸ್ ಕಳತ್ತೂರು ಅಧ್ಯಕ್ಷತೆ ವಹಿಸಿದರು. ಪ್ರಧಾನ ಕಾರ್ಯದರ್ಶಿ ಸಹೀರ್ ಆಸಿಫ್ ಸ್ವಾಗತಿಸಿದರು.

ರಾಜ್ಯದ ಬಡಜನರು ಆಶ್ರಯಿಸುವ ಆಸ್ಪತ್ರೆಗಳಲ್ಲಿ ಸರಕಾರದ ಅನಾಸ್ಥೆಯಿಂದಾಗಿ ದೊಡ್ಡ ದುರಂತ ಉಂಟಾಗಿದ್ದು, ಡಾಕ್ಟರ್‌ಗಳು, ನರ್ಸ್‌ಗಳ ಸಹಿತ ನೌಕರರನ್ನು ನೇಮಕಗೊಳಿಸದ ಕಾರಣ ಚಿಕಿತ್ಸಾ ವಲಯ ಬುಡಮೇಲುಗೊಂಡಿದೆ ಎಂದು ಉದ್ಘಾಟನಾ ಭಾಷಣದಲ್ಲಿ ಮುಖಂಡರು ಅಭಿಪ್ರಾಯಪಟ್ಟರು. ವಿಶ್ವಕ್ಕೇ ಮಾದರಿಯಾದ ಕೇರಳದ ಆರೋಗ್ಯವಲಯವನ್ನು ಎಡರಂಗ ಸರಕಾರ ಚಿಂದಿಮಾಡಿದೆ ಎಂದು, ಜಿಲ್ಲೆಯ ಆರೋಗ್ಯವಲಯದಲ್ಲಿ ಸರಕಾರ ಅವಗಣನೆ ತೋರುತ್ತಿದೆ ಎಂದು ಮಾರ್ಚ್‌ನಲ್ಲಿ ಆರೋಪಿಸಲಾಯಿತು. ಜನರಲ್ ಆಸ್ಪತ್ರೆಯಲ್ಲಿ ಶಾಸಕ ಎನ್.ಎ. ನೆಲ್ಲಿಕುನ್ನುರ ನಿರಂತರ ಪರಿಶ್ರಮಗಳ ಫಲವಾಗಿ ಮಂಜೂರಾದ ರಾತ್ರಿ ಕಾಲ ಮರಣೋತ್ತರ ಪರೀಕ್ಷೆಗೆ ಅಗತ್ಯದ ವೈದ್ಯರಿಲ್ಲದ ಕಾರಣ ಈಗ ಮೊಟಕುಗೊಂಡಿದೆ. ಈ ವಿಷಯಗಳಲ್ಲೆಲ್ಲಾ ಸರಕಾರ ತುರ್ತಾಗಿ ಕ್ರಮ ಕೈಗೊಂಡು ಜಿಲ್ಲೆಯ ಸರಕಾರಿ ಆಸ್ಪತ್ರೆಗಳ ಅವಗಣನೆ ಕೊನೆಗೊಳಿಸಬೇಕೆಂದು ಮುಖಂಡರು ಆಗ್ರಹಿಸಿದರು. ಮುಸ್ಲಿಂ ಲೀಗ್ ಮಂಡಲ ಪ್ರಧಾನ ಕಾರ್ಯದರ್ಶಿ ಕೆ.ಕೆ. ಬದರುದ್ದೀನ್ ಸಹಿತ ಹಲವರು ಮಾತನಾಡಿದರು.

Leave a Reply

Your email address will not be published. Required fields are marked *

You cannot copy content of this page