ರೈಲು ನಿಲ್ದಾಣಗಳಲ್ಲಿ ಕನ್ನಡ ನಾಮಫಲಕ: ಗಡಿ ಅಭಿವೃದ್ಧಿ ಪ್ರಾಧಿಕಾರದ ಮನವಿಗೆ ಸ್ಪಂದನೆ
ಕಾಸರಗೋಡು: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಜಿಲ್ಲೆಯ ವಿವಿಧ ರೈಲ್ವೇ ನಿಲ್ದಾಣಗಳಲ್ಲಿ ಕನ್ನಡ ಭಾಷೆಯ ನಾಮಫಲಕಗಳನ್ನು ಸ್ಥಾಪಿಸಬೇಕೆಂದು ನೀಡಿದ ಮನವಿಗೆ ಫಲಪ್ರಾಪ್ತಿ ಲಭಿಸಿದೆ. ಭಾಷಾ ಅಲ್ಪಸಂಖ್ಯಾತ ಕಾರ್ಯಾಲಯ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪಾಲಕ್ಕಾಡ್ ರೈಲ್ವೇ ವಿಭಾಗೀಯ ವ್ಯವಸ್ಥಾಪಕರಿಗೆ ನಿರ್ದೇಶ ನೀಡಿರುವುದಾಗಿ ಗಡಿ ಪ್ರಾಧಿಕಾರ ತಿಳಿಸಿದೆ.
ಮಲಯಾಳ, ಆಂಗ್ಲ ಭಾಷೆಯೊಂದಿಗೆ ಕನ್ನಡದಲ್ಲೂ ರೈಲು ನಿಲ್ದಾಣಗಳಲ್ಲಿ ನಾಮಫಲಕ ಸ್ಥಾಪಿಸಬೇಕೆಂದು ಗಡಿ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಕಾಸರಗೋಡು ಜಿಲ್ಲಾಧಿಕಾರಿ, ರೈಲ್ವೇ ಇಲಾಖೆ ಹಾಗೂ ಕೇಂದ್ರ ಸರಕಾರದ ಭಾಷಾ ಅಲ್ಪ ಸಂಖ್ಯಾತ ಕಾರ್ಯಾಲಯಕ್ಕೆ ಮನವಿ ಸಲ್ಲಿಸಲಾಗಿತ್ತು. ಈ ಮನವಿ ಹಿನ್ನೆಲೆಯಲ್ಲಿ ಈಗ ಕನ್ನಡ ನಾಮಫಲಕ ಸ್ಥಾಪನೆಗೆ ಸ್ಪಂದನೆ ಉಂಟಾಗಿದ್ದು, ಇದಕ್ಕಾಗಿ ಪ್ರಾಧಿಕಾರ ಸಂಬಂಧಪಟ್ಟವರನ್ನು ಅಭಿನಂದಿಸಿದೆ.