ವಿಪಕ್ಷ ಪ್ರತಿಭಟನೆ: ಉಣ್ಣಿತ್ತಾನ್ ಸೇರಿದಂತೆ ೯೨ ಸಂಸದರ ಅಮಾನತು; ಸಾಮೂಹಿಕ ರಾಜೀನಾಮೆಗೆ ವಿಪಕ್ಷ ಚಿಂತನೆ
ನವದೆಹಲಿ: ಸಂಸತ್‌ನೊಳಗೆ ನಡೆದ ಹೊಗೆ ದಾಳಿ ಪ್ರಕರಣದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್‌ಷಾ ಸಂಸತ್‌ನಲ್ಲಿ ಹೇಳಿಕೆ ನೀಡಬೇಕೆಂದು ಆಗ್ರಹಿಸಿ ಲೋಕಸಭೆ ಮತ್ತು ರಾಜ್ಯ ಸಭೆಗಳ ಕಲಾಪಗಳಿಗೆ ಅಡ್ಡಿಪಡಿಸಿ ವಿಪಕ್ಷಗಳು ನಡೆಸುತ್ತಿರುವ ಪ್ರತಿಭಟನೆ ಇನ್ನಷ್ಟು ತೀವ್ರಗೊಳ್ಳುತ್ತಿದ್ದು, ಹೀಗೆ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಕಾಸರಗೋಡು ಲೋಕಸಭಾ ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಸೇರಿದಂತೆ ವಿಪಕ್ಷಗಳ ಒಟ್ಟು ೯೨ ಸಂ ಸದರನ್ನು ಅಮಾನತುಗೊಳಿಸಲಾಗಿದೆ.
ಸಂಸತ್‌ನ ಕಲಾಪಗಳಿಗೆ ಅಡ್ಡಿಪಡಿಸಿದ ಆರೋಪದ ಮೇಲೆ ಲೋಕಸಭೆಯ ೩೩, ರಾಜ್ಯಸಭೆಯ ೪೫ ಸೇರಿದಂತೆ ನಿನ್ನೆ ಮಾತ್ರವಾಗಿ ೭೮ಮಂದಿಯನ್ನು ಅಮಾನತು ಗೊಳಿಸಲಾಗಿದೆ. ಆ ಮೂಲಕ ಅಮಾನತುಗೊಂಡ ಸಂಸದರ ಒಟ್ಟು ಸಂಖ್ಯೆ ಈಗ ೯೨ಕ್ಕೇರಿದೆ. ಹೀಗೆ ಅಮಾನತುಗೊಂಡವರಲ್ಲಿ ಉಣ್ಣಿತ್ತಾನ್‌ರ ಹೊರತಾಗಿ ಕೇರಳದ ಕೆ.ಸಿ. ವೇಣುಗೋಪಾಲ್ (ಕಾಂಗ್ರೆಸ್), ವಿ. ಶಿವದಾಸನ್ (ಸಿಪಿಎಂ), ಜೋಸ್ ಕೆ ಮಾಣಿ (ಕೇರಳ ಕಾಂಗ್ರೆಸ್ ಎಂ), ಜೋನ್ ಬ್ರಿಟ್ಟೋಸ್, ಎ.ಎ. ರಹೀಂ (ಸಿಪಿಎಂ), ಇ.ಟಿ. ಮೊಹಮ್ಮದ್ ಬಷೀರ್ (ಮುಸ್ಲಿಂಲೀಗ್), ಎನ್.ಕೆ. ಪ್ರೇಮಚಂದ್ರನ್ (ಆರ್‌ಎಸ್) ಎಂಬಿವರು ಒಳಗೊಂಡಿದ್ದಾರೆ. ಕಾಂಗ್ರೆಸ್‌ನ ಒಟ್ಟು ೩೮ (ಲೋಕಸಭೆ ಮತ್ತು ರಾಜ್ಯಸಭೆ ಸೇರಿ), ತೃಣಮೂಲ ಕಾಂಗ್ರೆಸ್‌ನ ೧೩, ಡಿಎಂಕೆ ೧೫, ಜೆಡಿಯು ೩, ಸಿಪಿಎಂ ೫, ಸಿಪಿಐ ೩, ಮುಸ್ಲಿಂ ಲೀಗ್ ೨, ಎಸ್‌ಪಿ ೨, ಆರ್‌ಜೆಡಿ ೨ ಮತ್ತು ಆರ್‌ಎಸ್‌ಪಿ, ಕೇರಳ ಕಾಂಗ್ರೆಸ್ ಎಂ, ಜೆಎಂಎಂ ಮತ್ತು ಎಜಿಎಂನ ತಲಾ ಓರ್ವರು ಒಳಗೊಂಡಿದ್ದಾರೆ.
ಇದರಿಂದಾಗಿ ಅಮಾನತುಗೊಂ ಡ ಸದಸ್ಯರಿಗೆ ಈಗ ನಡೆಯುತ್ತಿರುವ ಲೋಕಸಭೆಯ ಹಾಲಿ ಚಳಿಗಾಲ ಅಧಿವೇಶನದಲ್ಲಿ ಭಾಗವಹಿಸಲು ಸಾಧ್ಯವಾಗದು. ನಮ್ಮ ಬೇಡಿಕೆ ಈಡೇರಿಸದಿದ್ದಲ್ಲಿ ಸಂಸತ್ ಮತ್ತು ರಾಜ್ಯ ಸಭೆಗಳಲ್ಲಿ ನಮ್ಮ ಹೋರಾಟ ಇನ್ನಷ್ಟು ಮುಂದುವರಿಯಲಿದೆ. ಪ್ರತಿಭಟನೆ ಹೆಸರಲ್ಲಿ ಬೇಕಿದ್ದಲ್ಲಿ ವಿಪಕ್ಷಗಳ ಎಲ್ಲಾ ಸದಸ್ಯರನ್ನೂ ಅಮಾನತುಗೊಳಿಸಲಿ. ಅಷ್ಟರತನಕ ಪ್ರತಿಭಟನೆ ಮುಂದುವರಿಯಲಿ ದೆಯೆಂದು ವಿಪಕ್ಷಗಳು ಸ್ಪಷ್ಟಪಡಿಸ ಲಿವೆ. ಮಾತ್ರವಲ್ಲ ತಮ್ಮ ಸದಸ್ಯತನಕ್ಕೆ ಸಾಮೂಹಿಕ ರಾಜೀನಾಮೆ ನೀಡಲು ವಿಪಕ್ಷಗಳು ಇನ್ನೊಂದೆಡೆ ಚಿಂತನೆ ಯಲ್ಲೂ ತೊಡಗಿದೆ. ಸಂಸತ್‌ನೊಳಗೆ ಕಲಾಪಗಳಿಗೆ ಅಡ್ಡಿ ಉಂಟುಮಾಡಿದ ಕಾರಣ ನೀಡಿ ೧೯೮೯ರಲ್ಲಿ ೬೩ ಸಂಸದರನ್ನು ಅಮಾನತುಗೊಳಿಸಲಾಗಿತ್ತು. ಅದನ್ನು ಪ್ರತಿಭಟಿಸಿ ಅಂದು ವಿಪಕ್ಷಗಳ ಎಲ್ಲಾ ಸಂಸದರೂ ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದರು. ಅಂತಹ ಕ್ರಮ ಈಗ ಮತ್ತೆ ಮರಳಬಹುದೇ ಎಂಬುವುದನ್ನು ಇನ್ನಷ್ಟೇ ಕಾದುನಿಂತು ನೋಡಬೇಕಾಗಿದೆ.