ತೃಶೂರು: ಕೊಲೆಯತ್ನ ಸೇರಿದಂತೆ 53 ಪ್ರಕರಣಗಳಲ್ಲಿ ಆರೋಪಿಯಾಗಿರುವ ಕುಖ್ಯಾತ ತೃಶೂರು ವೀಯೂರು ಸೆಂಟ್ರಲ್ ಜೈಲು ಪರಿಸರದಿಂದ ನಿನ್ನೆ ಪರಾರಿಯಾಗಿದ್ದಾನೆ.
ಬಾಲಮುರುಗನ್ (45) ಎಂಬಾತ ಪರಾರಿಯಾದ ಕುಖ್ಯಾತ ಆರೋಪಿ. ಈತ ಕೊಲೆಯತ್ನ, ಕಳವು, ದರೋಡೆ ಸೇರಿದಂತೆ 53 ಪ್ರಕರಣಗಳಲ್ಲಿ ಆರೋಪಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ತಮಿಳುನಾಡಿನಲ್ಲಿ ಬಾಲಮುರುಗನ್ ವಿರುದ್ಧ ಕೇಸುಗಳಿದ್ದು ಅದಕ್ಕೆ ಸಂಬಂಧಿಸಿ ತಮಿಳುನಾಡು ಪೊಲೀಸರು ಆತನನ್ನು ವೀಯೂರು ಸೆಂಟ್ರಲ್ ಜೈಲಿನಿಂದ ತಮ್ಮ ಕಸ್ಟಡಿಗೆ ಪಡೆದು ತಮಿಳುನಾಡಿನ ವೀರುನಗರ ನ್ಯಾಯಾಲಯದಲ್ಲಿ ಹಾಜರುಪಡಿಸಿದ ಬಳಿಕ ನಿನ್ನೆ ರಾತ್ರಿ ಆತನನ್ನು ಮತ್ತೆ ವೀಯೂರು ಸೆಂಟ್ರಲ್ ಜೈಲಿಗೆ ಕರೆತರುವ ವೇಳೆ ಆತ ರಾತ್ರಿ 9.45ರ ವೇಳೆ ತಮಿಳುನಾಡು ಪೊಲೀಸರ ಕಾರಿನಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಆತನ ಪತ್ತೆಗಾಗಿ ಪೊಲೀಸರು ವ್ಯಾಪಕ ಶೋಧ ಆರಂಭಿಸಿದ್ದಾರೆ.
ಇದೇ ರೀತಿ ಕಳೆದ ಮೇ ತಿಂಗಳಲ್ಲಿ ಈತ ತಮಿಳುನಾಡು ಪೊಲೀಸರ ವಾಹನದಿಂದ ತಪ್ಪಿಸಿ ಅಲ್ಲೇ ಇದ್ದ ಬೈಕ್‌ನ್ನು ಕದ್ದು ಅದರಲ್ಲಿ ಪರಾರಿಯಾಗಿದ್ದನು. ನಂತರ ಆತನನ್ನು ಪತ್ತೆಹಚ್ಚಿ ಸೆರೆಹಿಡಿಯಲಾಗಿತ್ತು. ಬಳಿಕ ಆತ ನಿನ್ನೆ ರಾತ್ರಿ ವೀಯೂರು ಸೆಂಟ್ರಲ್ ಜೈಲು ಪರಿಸರದಿಂದ ವೀಯೂರು ಸೆಂಟ್ರಲ್ ಜೈಲು ಪರಿಸರದಲ್ಲಿ ನಿಲ್ಲಿಸಲಾಗಿದ್ದ ಯಾವುದಾದರೂ ಬೈಕ್‌ನಲ್ಲಿ ಸಾಗಿರಬಹುದೇ ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.







