ಮುಳ್ಳೇರಿಯ: ಕೇಂದ್ರ ಸಹಕಾರಿ ಸಚಿವಾಲಯ ಘೋಷಿಸಿದ ರಾಷ್ಟ್ರೀಯ ಸಹಕಾರಿ ನೀತಿಯನ್ನು ಕೇರಳದಲ್ಲಿ ಜ್ಯಾರಿಗೊಳಿಸಲು ಕೇರಳ ಸರಕಾರ ಸಿದ್ಧವಾಗಬೇಕೆಂದು ಸಹಕಾರ ಭಾರತಿ ರಾಜ್ಯ ಅಧ್ಯಕ್ಷ ನ್ಯಾ| ಕೆ. ಕರುಣಾಕರನ್ ಆಗ್ರಹಪಟ್ಟಿದ್ದಾರೆ. ಮುಳ್ಳೇರಿಯ ಗಣೇಶ ಕಲಾಮಂದಿರದಲ್ಲಿ ಜರಗಿದ ಸಹಕಾರ ಭಾರತಿ ಕಾಸರಗೋಡು ಜಿಲ್ಲಾ ಅಭ್ಯಾಸವರ್ಗದಲ್ಲಿ ಮುಖ್ಯ ಭಾಷಣ ಮಾಡಿ ಅವರು ಈ ಬಗ್ಗೆ ತಿಳಿಸಿದ್ದಾರೆ. ದೇಶದ ಸಮಗ್ರ ಅಭಿವೃದ್ಧಿಯಲ್ಲಿ ಮುಖ್ಯ ಪಾತ್ರ ವಹಿಸುವ ಸಹಕಾರಿ ಸಂಘದ ಅಭಿವೃದ್ಧಿಗೆ ರಾಷ್ಟ್ರೀಯ ಸಹಕಾರಿ ನೀತಿ ಸಹಾಯಕವಾಗಲಿದೆ. ಸಹಕಾರಿ ನೀತಿಯಲ್ಲಿ ಘೋಷಿಸಿದ ಸೌಲಭ್ಯ ಗಳನ್ನು ಕೇರಳದ ಸಹಕಾರಿ ಸಂಸ್ಥೆಗಳಿಗೆ ಲಭ್ಯಗೊಳಿಸಲು ಕೇರಳ ಸರಕಾರ ರಾಷ್ಟ್ರೀಯ ಸಹಕಾರಿ ನೀತಿಯನ್ನು ಸ್ವಾಗತಿಸಬೇಕೆಂದು ಅವರು ತಿಳಿಸಿದರು. ನಿವೃತ್ತ ಸಹಕಾರಿ ರಿಜಿಸ್ಟ್ರಾರ್ ಡಾ. ಕೆ.ಪಿ. ಜಯಶ್ರೀ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಹಕಾರಿ ರಂಗದ ಅಭಿವೃದ್ಧಿಗೆ ರಾಜಕೀಯ ಅಡ್ಡಿಯಾಗ ಕೂಡದೆಂದು ಅವರು ತಿಳಿಸಿದರು. ನಿವೃತ್ತ ಸಹಕಾರಿ ಇಲಾಖೆಯ ಕಾರ್ಯದರ್ಶಿ ಕೆ. ಗೋಪಾಲಕೃಷ್ಣ ಭಟ್ ಮುಖ್ಯ ಅತಿಥಿಯಾಗಿದ್ದರು. ಜಿಲ್ಲಾಧ್ಯಕ್ಷ ಪದ್ಮರಾಜ ಪಟ್ಟಾಜೆ ಅಧ್ಯಕ್ಷತೆ ವಹಿಸಿದರು. ಐತ್ತಪ್ಪ ಮವ್ವಾರು, ವೇಣುಗೋಪಾಲನ್ ಕೆ.ಎನ್, ರಾಧಾಕೃಷ್ಣನ್ ಕೆ. ಮಾತನಾಡಿದರು. ರಾಜ್ಯ ಕಾರ್ಯದರ್ಶಿ ಗಣೇಶ್ ಪಾರೆಕಟ್ಟೆ ಸ್ವಾಗತಿಸಿ, ಹರಿಣಿ ಪಿ. ನಾಯ್ಕ್ ವಂದಿಸಿದರು. ಸುಬ್ರಾಯ ನಂದೋಡಿ, ಎಂ.ವಿ. ಶಶಿಕುಮಾರ್, ಮೋಹನನ್ ಕೆ.ಪಿ. ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಿದರು. ಲೋಕೇಶ್ ಜೋಡುಕಲ್ಲು ಸಮಾರೋಪ ಭಾಷಣ ನಡೆಸಿದರು.






