ಕುಂಬಳೆ: ತಲಪಾಡಿ- ಚೆರ್ಕಳ ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ಟೋಲ್ ಪ್ಲಾಜಾದಲ್ಲಿ ಇಂದಿನಿಂದ ವಾಹನಗಳಿಂದ ಟೋಲ್ ಸಂಗ್ರಹ ಆರಂಭಿಸುವುದರ ವಿರುದ್ಧ ತೀವ್ರ ಪ್ರತಿಭಟನೆ ಕೇಳಿ ಬಂದ ಹಿನ್ನೆಲೆಯಲ್ಲಿ ಟೋಲ್ ಸಂಗ್ರಹ ಮುಂದೂಡಿರು ವುದಾಗಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭರವಸೆ ನೀಡಿದ್ದಾರೆಂದು ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ತಿಳಿಸಿದ್ದಾರೆ.
ಕುಂಬಳೆಯಲ್ಲಿ ಟೋಲ್ ಪ್ಲಾಜಾ ಮಂಜೂರು ಮಾಡಿರುವುದರ ವಿರುದ್ಧ ಕ್ರಿಯಾ ಸಮಿತಿ ಹೈಕೋರ್ಟ್‌ನಲ್ಲಿ ಸಲ್ಲಿಸಿದ ಅರ್ಜಿಯ ಮೇಲೆ ನ.೧೪ರಂದು ಅಂತಿಮ ತೀರ್ಪು ಬರುವವರೆಗೆ ಟೋಲ್ ಸಂಗ್ರಹ ನಡೆಸುವುದಿಲ್ಲವೆಂದು ಜಿಲ್ಲಾಧಿಕಾರಿ ಭರವಸೆ ನೀಡಿರುವುದಾಗಿ ಶಾಸಕ ತಿಳಿಸಿದ್ದಾರೆ. ಇಂದಿನಿಂದ ಟೋಲ್ ಸಂಗ್ರಹಿಸುವುದಾಗಿ ತಿಳಿಸಿ ಎರಡು ಪತ್ರಿಕೆಗಳಲ್ಲಿ ನ್ಯಾಷನಲ್ ಹೈವೇ ಅಥೋರಿಟಿ ಆಫ್ ಇಂಡಿಯ ಜಾಹೀ ರಾತು ನೀಡಿತ್ತು. ಈ ಹಿನ್ನೆಲೆಯಲ್ಲಿ ಕ್ರಿಯಾ ಸಮಿತಿ ನಿನ್ನೆ ಸಭೆ ಸೇರಿ ಟೋಲ್ ಸಂಗ್ರಹಿಸಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲವೆಂದು ನಿರ್ಧಾರ ಕೈಗೊಂಡಿತ್ತು. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ತಿಳಿಸಿದ ಹಿನ್ನೆಲೆಯಲ್ಲಿ ಟೋಲ್ ಸಂಗ್ರಹ ಮುಂದೂಡಲು ನಿರ್ಧರಿಸಿರುವುದಾಗಿ ಶಾಸಕ ತಿಳಿಸಿದ್ದಾರೆ.
ಕುಂಬಳೆ ಟೋಲ್ ಪ್ಲಾಜಾದಲ್ಲಿ ಇಂದಿನಿಂದ ವಾಹನಗಳಿಂದ ಯೂಸರ್ ಫೀ ಸಂಗ್ರಹಿಸುವುದಾಗಿ ತಿಳಿದು ಬಂದ ಹಿನ್ನೆಲೆಯಲ್ಲಿ ಕ್ರಿಯಾ ಸಮಿತಿ ನಿನ್ನೆ ಆರಿಕ್ಕಾಡಿ ಕೆ.ಪಿ. ರೆಸೋರ್ಟ್‌ನಲ್ಲಿ ಸಭೆ ಸೇರಿ ಟೋಲ್ ಸಂಗ್ರಹ ವಿರುದ್ಧ ಪ್ರತಿಭಟನೆಗೆ ನಿರ್ಧರಿಸಿತ್ತು. ಸಭೆಯಲ್ಲಿ ಕ್ರಿಯಾ ಸಮಿತಿ ಚೆಯರ್‌ಮೆನ್ ಶಾಸಕ ಎಕೆಎಂ ಅಶ್ರಫ್ ಅಧ್ಯಕ್ಷತೆ ವಹಿಸಿದರು. ಎ.ಕೆ. ಆರಿಫ್, ಲಕ್ಷ್ಮಣ ಪ್ರಭು, ಫಾರೂಕ್ ಶಿರಿಯ, ಖಾಲಿದ್ ಬಂಬ್ರಾಣ, ಸತ್ತಾರ್ ಆರಿಕ್ಕಾಡಿ, ಅಬ್ದುಲ್ ಲತೀಫ್, ಮೊಹಮ್ಮದ್ ಅಲಿ, ಅಸೀಸ್ ಕಳತ್ತೂರು, ಮೊಹಮ್ಮದ್ ಕುಂಞಿ ಕುಂಬೋಲ್, ಯೂಸಫ್ ಉಳುವಾರ್, ಮೊಯ್ದೀನ್ ಅಸೀಸ್ ಮೊದಲಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು. ಅಶ್ರಫ್ ಕಾರ್ಲೆ ಸ್ವಾಗತಿಸಿದರು.






