ಕಾಸರಗೋಡು: ಪತಿ ಗಲ್ಫ್ಗೆ ಹೋದ ಬೆನ್ನಲ್ಲೇ ಇಬ್ಬರು ಪುಟ್ಟ ಮಕ್ಕಳನ್ನು ಬಿಟ್ಟು ಪರಾರಿಯಾದ ಯುವತಿ ಹಾಗೂ ಪ್ರಿಯತಮನನ್ನು ಸೆರೆ ಹಿಡಿಯಲಾಗಿದೆ. ತಳಿಪರಂಬ ಪನ್ನಿಯೂರ್ ಮಳೂರ್ನ ಕೆ. ನೀತು (35) ಹಾಗೂ ಮಳೂರ್ ನಿವಾಸಿ ಸುಮೇಶ್ (38) ಎಂಬಿವರು ಬಂಧಿತ ಯುವಕ ಹಾಗೂ ಯುವತಿ. ಇವರು ನಿನ್ನೆ ಚಟ್ಟಂಚಾಲ್ನ ಕ್ವಾರ್ಟರ್ಸ್ವೊಂದರಿಂದ ಕಾರಿನಲ್ಲಿ ಊರಿಗೆ ಮರಳುತ್ತಿದ್ದಾಗ ಚಿಟ್ಟಾರಿಕಲ್ ಎ.ಎಸ್.ಐ ಶ್ರೀಜು, ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ಸುಜಿತ್, ವನಿತಾ ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ಸನಿಲ ಎಂಬಿವರು ಸೇರಿ ಸೆರೆ ಹಿಡಿದಿದ್ದಾರೆ. ಎಸ್ಐ ಮಧುಸೂದನನ್ ಮಡಿಕೈ ನೇತೃತ್ವದಲ್ಲಿ ಯುವತಿ ಹಾಗೂ ಪ್ರಿಯತಮನನ್ನು ಪತ್ತೆಹಚ್ಚಲು ತನಿಖೆ ನಡೆಸುತ್ತಿರುವಂತೆ ಅವರಿಬ್ಬರೂ ಚಟ್ಟಂಚಾಲ್ನ ಕ್ವಾರ್ಟರ್ಸ್ವೊಂದರಲ್ಲಿ ಇರುವುದಾಗಿ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ನಿನ್ನೆ ಮಧ್ಯಾಹ್ನ ಪೊಲೀಸರು ಚಟ್ಟಂಚಾಲ್ಗೆ ಬರುತ್ತಿದ್ದಂತೆ ಅವರಿಬ್ಬರೂ ಕಾರಿನಲ್ಲಿ ಪ್ರಯಾಣಿಸುತ್ತಿರುವ ಬಗ್ಗೆ ಪೊಲೀಸರಿಗೆ ಸೂಚನೆ ಲಭಿಸಿದೆ. ಇದರಂತೆ ಅವರನ್ನು ಪತ್ತೆಹಚ್ಚಿ ಕಸ್ಟಡಿಗೆ ತೆಗೆಯಲಾಯಿತು.
ಕಳೆದ ಶುಕ್ರವಾರ ನೀತು ಪತಿ ಮನೆಯಿಂದ ನಾಪತ್ತೆಯಾಗಿದ್ದಳು. ಈಕೆ ಪರಾರಿಯಾಗುವ ಎರಡು ದಿನಗಳ ಹಿಂದೆ ಪತಿ ಗಲ್ಫ್ಗೆ ತೆರಳಿದ್ದನು. ಇದೇ ಸಂದರ್ಭದಲ್ಲಿ ಸುಮೇಶ್ ಕೂಡಾ ನಾಪತ್ತೆಯಾದ ಬಗ್ಗೆ ತಳಿಪರಂಬ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.





