ಕಾಸರಗೋಡು: ಕುಂಬಳೆಯ ಸಮೀಪದ ಆರಿಕ್ಕಾಡಿ ಟೋಲ್‌ಗೇಟ್‌ನಲ್ಲಿ ಬಸ್‌ಗಳಿಗೆ ಹೋಗಿಬರಲು 440 ರೂ. ದರದಲ್ಲಿ ಯೂಸರ್ ಫೀ ನೀಡಬೇಕೆಂಬ ಸೂಚನೆ ಲಭಿಸಿದ್ದು, ನಾಲ್ಕು ಟ್ರಿಪ್‌ಗಳಾಗಿ ಸಂಚರಿಸುವ ಒಂದು ಬಸ್‌ಗೆ ದಿನಕ್ಕೆ 1760ರೂ. ನೀಡಬೇಕಾಗಿ ಬರಲಿದೆ ಎಂದು ಕಾಸರಗೋಡು ಜಿಲ್ಲಾ ಪ್ರೈವೇಟ್ ಬಸ್ ಆಪರೇಟರ್ಸ್ ಫೆಡರೇಶನ್ ತಿಳಿಸಿದೆ. ಸಾಮಾನ್ಯ ಬಸ್‌ಗಳಿಗೆ ದಿನವೊಂದಕ್ಕೆ 1000- 1500 ರೂ. ಮಾತ್ರವೇ ಉಳಿತಾಯವಾಗುತ್ತಿದ್ದು, ಅದರಲ್ಲಿ 1700 ಟೋಲ್ ನೀಡಬೇಕಾಗಿ ಬಂದರೆ ಮತ್ತೆ ಸರ್ವೀಸ್ ನಡೆಸಬೇಕಾದ ಅಗತ್ಯವಿಲ್ಲವೆಂದು ಈ ಹಿನ್ನೆಲೆಯಲ್ಲಿ ಸಂಚಾರ ನಿಲುಗಡೆಗೊಳಿಸಬೇಕಾದ ಸ್ಥಿತಿ ಉಂಟಾಗಲಿದೆ ಎಂದು ಫೆಡರೇಶನ್ ತಿಳಿಸಿದೆ.
ರಾಜ್ಯದ ಖಾಸಗಿ ಬಸ್‌ಗಳಿಗೆ ಸರ್ವೀಸ್ ರಸ್ತೆ ಮೂಲಕ ಮಾತ್ರವೇ ಸಂಚರಿಸಲು ಅವಕಾಶ ನೀಡಲಾಗಿದೆ. ಕೆಎಸ್‌ಆರ್‌ಟಿಸಿ, ಫಾಸ್ಟ್ ಪ್ಯಾಸೆಂಜರ್, ದೀರ್ಘದೂರ ಬಸ್‌ಗಳು ಮಾತ್ರವೇ ಹೆದ್ದಾರಿ ಮೂಲಕ ಸಂಚರಿಸುತ್ತಿರುವುದು. ಕಾಸರಗೋಡಿನಿಂದ ಹೊರಟು ತಲಪಾಡಿ ಭಾಗಕ್ಕೆ ತೆರಳುವ ಬಸ್‌ಗಳು ಕುಂಬಳೆ- ಆರಿಕ್ಕಾಡಿ ಸೇತುವೆ ವರೆಗೆ 12 ಕಿಲೋ ಮೀಟರ್ ದೂರ ಸರ್ವೀಸ್ ರಸ್ತೆಯಲ್ಲಿ ಸಂಚರಿಸುತ್ತಿದೆ. ಅಲ್ಲಿಂದ ಸರ್ವೀಸ್ ರಸ್ತೆ ಕೊನೆಗೊಳಿಸಿ ಹೆದ್ದಾರಿಗೆ ಜೋಡಿಸಲಾಗಿದೆ. ಅಲ್ಲಿಂದ 800 ಮೀಟರ್ ದೂರ ಮಾತ್ರವೇ ಎನ್‌ಎಚ್ ಮೂಲಕ ಸಂಚರಿಸಬೇಕಾಗಿರುವುದು. ಸರ್ವೀಸ್ ರೋಡ್ ಇಲ್ಲದ ಕಾರಣದಿಂದಾಗಿ ಎನ್‌ಎಚ್ ಮೂಲಕ ಸಂಚರಿಸಬೇಕಾಗಿ ಬರುತ್ತಿದೆ. ಕೇವಲ ೩೫ ಕಿಲೋ ಮೀಟರ್‌ನೊಳಗೆ ಸಂಚರಿಸುವ, ಎಲ್ಲಾ ಬಸ್ ನಿಲ್ದಾಣಗಳನ್ನು ಸಂಪರ್ಕಿಸಿ ಸಾಗುವ ಖಾಸಗಿ ಬಸ್‌ಗಳಿಗೆ ಎನ್‌ಎಚ್‌ನಲ್ಲಿ ಸಾಗಬೇಕಾದ ಅಗತ್ಯವಿಲ್ಲ. ಆದುದರಿಂದಾಗಿ ಖಾಸಗಿ ಬಸ್‌ಗಳಿಗೆ ಟೋಲ್ ಹೇರುವುದು ಅನ್ಯಾಯವಾಗಿದೆ ಎಂದು, ಈ ತೀರ್ಮಾನವನ್ನು ಜ್ಯಾರಿಗೊಳಿಸುವುದಾದರೆ ಆ ಮೂಲಕವಿರುವ ಖಾಸಗಿ ಬಸ್‌ಗಳು ಸಂಚಾರ ಮೊಟಕುಗೊಳಿಸಬೇಕಾಗಿ ಬರಬಹುದೆಂದು ಫೆಡರೇಶನ್ ತಿಳಿಸಿದೆ. ಈ ಬಗ್ಗೆ ಅನ್ಯಾಯವಾಗಿ ಶುಲ್ಕ ವಸೂಲು ಮಾಡಲಿರುವ ತೀರ್ಮಾನವನ್ನು ಖಾಸಗಿ ಬಸ್ ಆಪರೇಟರ್ಸ್ ಫೆಡರೇಶನ್ ಜಿಲ್ಲಾ ಸಮಿತಿ ಸಂಬಂಧಪಟ್ಟವರಿಗೆ ಮನವಿ ನೀಡಿ ರದ್ದುಗೊಳಿಸಲು ಆಗ್ರಹಿಸಿದೆ. ಜಿಲ್ಲಾಧ್ಯಕ್ಷ ಕೆ. ಗಿರೀಶ್, ತಾಲೂಕು ಕಾರ್ಯದರ್ಶಿ ಸಿ.ಎ. ಮೊಹಮ್ಮದ್ ಕುಂಞಿ, ಅಧ್ಯಕ್ಷ ಕೆ.ಎನ್. ಬಾಲಕೃಷ್ಣನ್, ಕೋಶಾಧಿಕಾರಿ ರಾಜೇಶ್, ರಾಧಾಕೃಷ್ಣನ್ ಎಸ್, ಇಬ್ರಾಹಿಂ ಸಫರ್, ಎಸ್.ಕೆ. ಹಮೀದ್, ಇಬ್ರಾಹಿಂ ಮರ್ಸಾನ ಭಾಗವಹಿಸಿದರು.







