ಆಚಾರ ಉಲ್ಲಂಘನೆ, ಶಬರಿಮಲೆ ಕ್ಷೇತ್ರದ ಚಿನ್ನ ಅಪಹರಣ ನಡೆಸಿದವರಿಗೆ ದೇವದೋಷ ತಪ್ಪದು- ಸಾಧ್ವಿ ಶ್ರೀ ಮಾತಾನಂದಮಯಿ

ಕಾಸರಗೋಡು: ಶಬರಿಮಲೆ ಚಿನ್ನ ಅಪಹರಣ ಮತ್ತು ಆಚಾರ ಉಲ್ಲಂಘನೆ ಮಾಡಿದವರಿಗೆ ದೋಷ ತಪ್ಪದು. ಎಲ್ಲಿ ಅನ್ಯಾಯ, ಅಧರ್ಮ, ಅಕ್ರಮ ನಡೆಯುತ್ತದೋ ಆವಾಗ ಮಹಿಳೆ ಅಬಲೆಯಾಗದೆ ಸಬಲೆಯಾಗುತ್ತಾಳೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಸಾಧ್ವಿ ಶ್ರೀ ಮಾತಾನಂದಮಯಿ ನುಡಿದರು. ನುಳ್ಳಿಪ್ಪಾಡಿ ಶ್ರೀ ಅಯ್ಯಪ್ಪ ಭಜನಾಮಂದಿರದಲ್ಲಿ ನಡೆಯುವ ಮಂಡಲ ಭಜನೆ ಉದ್ಘಾಟಿಸಿ ಅವರು ಆಶೀರ್ವಚನ ನೀಡುತ್ತಿದ್ದರು. ಮನುಷ್ಯ ಇಂದ್ರಿಯಗಳ ದಾಸನಾಗದೆ ಭೂಮಿಯಲ್ಲಿ ಬದುಕುವ ಅವಕಾಶವಿತ್ತ ಭಗವಂತನ ದಾಸನಾಗಬೇಕು. ದೇವರು ಮೆಚ್ಚುವ ಕೆಲಸಗಳನ್ನಷ್ಟೇ ಮಾಡಬೇಕು. ಅದರಿಂದಲೇ ಮಾನವ ಜನ್ಮಕ್ಕೆ ಮಾಧವನಿಂದ ಮೋಕ್ಷ ಎಂದು ಅವರು ನುಡಿದರು.

ಈ ಹಿಂದೆ ಶಬರಿಮಲೆಯಲ್ಲಿ ಆಚಾರ ಉಲ್ಲಂಘನೆಯಾದಾಗ ಮಹಿಳೆ ಯರು ಪ್ರತಿಭಟಿಸಿದ್ದಾರೆ. ಕಾಸರಗೋಡಿನ ಹೋರಾಟಗಳಲ್ಲಿ ಪಾಲ್ಗೊಂಡ ಮಹಿಳೆಯರ ಸಂಖ್ಯೆ ಹೆಚ್ಚಿದೆ. ಆದ್ದರಿಂದ ಅವರು ದೇವಪ್ರೀತಿಗೆ ಪಾತ್ರರಾಗಬಲ್ಲರು. ಶಬರಿಮಲೆಯಲ್ಲಿ  ದೇವಸಾನ್ನಿಧ್ಯದ ಸೊತ್ತು ಅಪಹರಿಸಿದವರಿಗೆ ದೇವದೋಷ ಜನ್ಮಜನ್ಮಕಾಲಕ್ಕೂ ತಪ್ಪುವುದಿಲ್ಲವೆಂದ ಅವರು ತತ್ವಕ್ಕಿಂತ ಮಿಗಿಲಾಗಿ ಮನುಷ್ಯ ಭಗವಂತನ ದಾಸನಾಗಬೇಕು ಎಂದರು. ಕ್ಷೇತ್ರ ತಂತ್ರಿ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಆಶೀರ್ವಚನ ನೀಡಿದರು. ಬ್ರಹ್ಮಕಲಶೋತ್ಸವ ಪದಾಧಿಕಾರಿ ಬಾಲು ಚೆನ್ನಿಕ್ಕರೆ, ಅಯ್ಯಪ್ಪ ಕ್ಷೇತ್ರ ಟ್ರಸ್ಟಿ ಗಣೇಶ ಅಮೈ, ಹರಿದಾಸ ಜಯಾನಂದ ಕುಮಾರ್, ಭಜನಾ ಪರಿಷತ್ ಅಧ್ಯಕ್ಷ ಕೆ.ಎನ್. ವೆಂಕಟ್ರಮಣ ಹೊಳ್ಳ, ಮಹಿಳಾ ಸಮಿತಿ ಅಧ್ಯಕ್ಷೆ ಶೋಭಾ ಮಾತನಾಡಿದರು. ಗುರುಪ್ರಸಾದ್ ಕೋಟೆಕಣಿ ಪ್ರಸ್ತಾಪಿಸಿ, ಹರೀಶ್ ಕೆ.ಎನ್. ಸ್ವಾಗತಿಸಿದರು. ಮಾತೃಸಮಿತಿ ಪ್ರತಿನಿಧಿಗಳು ಪ್ರಾರ್ಥನೆ ಹಾಡಿದರು. ಸಮಾರಂಭಕ್ಕೆ ಮುನ್ನವಾಗಿ ಹೊಸ ಬಸ್ ನಿಲ್ದಾಣ ಪರಿಸರದಿಂದ ಸಾಧ್ವಿ ಶ್ರೀ ಮಾತಾನಂದ ಮಯಿಯವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು.

RELATED NEWS

You cannot copy contents of this page