ಅಂಗಡಿಮೊಗರು: ಬಿದ್ದು ಸಿಕ್ಕಿದ ಚಿನ್ನಾಭರಣಗಳನ್ನು ವಾರಿಸುದಾರರಿಗೆ ಹಿಂತಿರುಗಿಸಿ ಹಳ್ಳಿಯ ಮುಗ್ದ ಮನಸ್ಸುಗಳು ಪ್ರಾಮಾಣಿಕತೆ ಮೆರೆದ ಘಟನೆ ನಡೆದಿದೆ.
ಪುತ್ತಿಗೆ ಪಂ.ನ ಅಂಗಡಿಮೊಗರು ವಾರ್ಡ್‌ನ ಕಲ್ಕಾರ್ ಉನ್ನತಿಯ ಬಾಬು ಎಂಬವರಿಗೆ ಇಲ್ಲಿನ ಮಸೀದಿ ಪಕ್ಕದ ಮನೆಯೊಂದರ ಅಂಗಳದಲ್ಲಿ ಪರ್ಸೊಂದು ಬಿದ್ದು ಸಿಕ್ಕಿದ್ದು ಅದನ್ನು ಆಮನೆಯೊಡತಿಯಲ್ಲಿ ಕೇಳಿ ತೆಗೆದುಕೊಂಡಿದ್ದರು. ಮನೆಗೆ ಬಂದ ಬಳಿಕ ಪರ್ಸ್ ನೋಡಿದಾಗ ಅದರಲ್ಲಿ ಚಿನ್ನದ ಪದಕ ಕಂಡುಬಂದಿದೆ. ಕೂಡಲೇ ಬಾಬುರ ತಂಗಿ ಗೀತಾ ಆ ಪದಕವನ್ನು ಅದರ ವಾರಿಸುದಾರರಿಗೆ ಹಿಂತಿರುಗಿಸಿ ಬರಲು ತಿಳಿಸಿದ್ದಾರೆ. ಅದರಂತೆ ಬಾಬು ಆ ಮನೆಗೆ ತೆರಳಿ ಪದಕವನ್ನು ಕೊಟ್ಟಾಗ ಆ ಯುವತಿ ಹಲವು ತಿಂಗಳುಗಳ ಹಿಂದೆ ಕಳೆದುಹೋದ ಬಂಗಾರದ ಪದಕ ಇದಾಗಿತ್ತೆಂದೂ ಇದರ ಜೊತೆಯಲ್ಲಿ ಇನ್ನೊಂದು ಉಂಗುರ ಸಹಾ ಕಳೆದುಹೋಗಿತ್ತೆಂದು ತಿಳಿಸಿದ್ದಾರೆ. ಇದರಂತೆ ಮತ್ತೆ ಮನೆಗೆ ಬಂದು ಪರ್ಸ್ ಕೊಡವಿದಾಗ ಅದರೊಳಗಿನಿಂದ ಉಂಗುರ ಕೆಳಗೆ ಬಿದ್ದಿದೆ. ಅದನ್ನು ಮತ್ತೆ ಆ ಮನೆಗೆ ತೆರಳಿ ಮನೆಯೊಡತಿಗೆ ನೀಡಿದ್ದಾರೆ.
ಬಡ ಕುಟುಂಬವಾದ ಬಾಬು, ತಂಗಿ ಗೀತರ ಮುಗ್ದ ಪ್ರಾಮಾಣಿಕತೆಯನ್ನು ಸ್ಥಳೀಯರು ಶ್ಲಾಘಿಸಿದ್ದಾರೆ. ಪದಕ ಹಾಗೂ ಉಂಗುರ ಲಭಿಸಿದ ಸಂತೋಷದಲ್ಲಿ ಆ ಮನೆಯವರು ಇವರಿಗೆ ಉಡುಗೊರೆ ನೀಡುವ ಭರವಸೆ ನೀಡಿದ್ದಾರೆ.






