ಉಪ್ಪಳ: ಎತ್ತರ ಪ್ರದೇಶದ ರಸ್ತೆ ಬದಿ ನಿಲ್ಲಿಸಿದ್ದ ಬೊಲೆರೋ ಜೀಪು ಹಿಂದಕ್ಕೆ ಚಲಿಸಿ ಮನೆಯೊಂದರ ಅಂಗಳ ಮೂಲಕ ಸಂಚರಿಸಿದ್ದು, ಈ ವೇಳೆ ಜೀಪು ಹರಿದು ತಾಯಿ ಹಾಗೂ ಪುತ್ರಿ ಗಂಭೀರ ಗಾಯಗೊಂಡ ಘಟನೆ ಬೇಕೂರು ಬೊಳುವಾಯಿಯಲ್ಲಿ ನಿನ್ನೆ ಸಂಜೆ ನಡೆದಿದೆ. ಅಪಘಾತದಲ್ಲಿ ಬೊಳುವಾಯಿ ನಿವಾಸಿ ದಿ| ಮಹಾಬಲ ಭಂಡಾರಿಯವರ ಪತ್ನಿ ಜಯಂತಿ ಭಂಡಾರಿ (74), ಪುತ್ರಿ ಸುಮಲತ ಶೆಟ್ಟಿ (47) ಎಂಬಿವರು ಗಾಯಗೊಂಡಿದ್ದಾರೆ. ಇವರನ್ನು ದೇರಳಕಟ್ಟೆಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಬೊಳುವಾಯಿಯ ಎತ್ತರ ಪ್ರದೇಶದ ರಸ್ತೆ ಬದಿ ಕೇರಳ ಕರುತ್ತೇಡತ್ ಆಗ್ರೋ ಸೊಸೈಟಿಯ ಬೊಲೆರೋ ಜೀಪನ್ನು ನಿನ್ನೆ ಸಂಜೆ ೪.೩೦ರ ವೇಳೆ ನಿಲ್ಲಿಸಿ ಅದರಲ್ಲಿದ್ದ ಇಬ್ಬರು ಆ ಪ್ರದೇಶದ ಮನೆಗಳಿಗೆ ಜೈವಿಕಗೊಬ್ಬರ ವಿತರಿಸಲು ತೆರಳಿದ್ದರು. ಈ ವೇಳೆ ಜೀಪು ಹಿಂಬದಿಗೆ ಚಲಿಸಿ ಸುಮಾರು ೧೫೦ ಮೀಟರ್‌ನಷ್ಟು ದೂರಕ್ಕೆ ಸಾಗಿದೆ.
ಬಳಿಕ ಮನೆಯ ಅಂಗಳದ ಮೂಲಕ ಸಂಚರಿಸಿದ್ದು, ಈ ವೇಳೆ ಅಲ್ಲಿ ಒಣಗಲು ಹಾಕಿದ್ದ ಅಡಿಕೆಯನ್ನು ತೆಗೆಯುತ್ತಿದ್ದ ಜಯಂತಿ ಭಂಡಾರಿ ಹಾಗೂ ಸುಮಲತ ಶೆಟ್ಟಿಯವರಿಗೆ ಢಿಕ್ಕಿ ಹೊಡೆದು ಜೀಪು ಸಮೀಪದ ಹೊಂಡಕ್ಕೆ ಬಿದ್ದಿದೆ. ಈ ವಿಷಯ ತಿಳಿದು ತಲುಪಿದ ಸ್ಥಳೀಯರು ಅವರನ್ನು ದೇರಳಕಟ್ಟೆಯ ಆಸ್ಪತ್ರೆಗೆ ತಲುಪಿಸಿ ದಾಖಲಿಸಿದ್ದಾರೆ.






