ಜಿಲ್ಲಾ ಶಾಲಾ ಕಲೋತ್ಸವ: ಫುಟ್ಬಾಲ್ ನಾಡಿನಲ್ಲಿ ಸಾಂಸ್ಕೃತಿಕ ಹಬ್ಬದ ಮೆರುಗು

ಕಾಸರಗೋಡು: ಇಶಾಲ್ ಗ್ರಾಮ ಅಥವಾ ಫುಟ್ಬಾಲ್ ನಾಡು ಎಂದೇ ತಿಳಿಯಲ್ಪಡುವ ಮೊಗ್ರಾಲ್ ಎಂಬ ಪ್ರದೇಶದಲ್ಲಿ ನಡೆಯುತ್ತಿರುವ ಕಂದಾಯ ಜಿಲ್ಲಾ ಶಾಲಾ ಕಲೋತ್ಸವ ನಾಡಿನಲ್ಲಿ ಹಬ್ಬದ ಕಳೆ ಮೂಡಿಸಿದೆ. ಮೊಗ್ರಾಲ್ ಜಿವಿಎಚ್‌ಎಸ್‌ಎಸ್‌ನಲ್ಲಿ ನಿನ್ನೆಯಿಂದ ಆರಂಭಗೊಂಡು ನಾಳೆವರೆಗೆ ನಡೆಯಲಿರುವ ಈ ಕಲೋತ್ಸವದಲ್ಲಿ 4000ದಷ್ಟು ಪ್ರತಿಭೆಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವರು.

ಇಶಾಲ್ ಎಂದರೆ ಸಂಗೀತಕ್ಕೆ ಸಂಬಂಧಪಟ್ಟದ್ದು ಎಂಬ ಅರ್ಥವಿದೆ. ಆದ್ದರಿಂದಲೇ ಕಲೋತ್ಸವ ವೇದಿಕೆ ಗಳಿಗೆ ಇಶಾಲ್, ಗಝಲ್, ಸಾರಂಗಿ, ಸಿತಾರ್, ಶೆಹನಾ, ಭೆರವ್, ಖಾಯಲ್, ಖವಾಲಿ, ದ್ರುಪತ್, ಮಲ್ಹರ್, ದರ್ಬಾರಿ, ಸಾಂತ್ವನಂ ಎಂಬೀ ಹೆಸರನ್ನಿಟ್ಟಿರುವುದು ಗಮನಾರ್ಹವಾಗಿದೆ.

ಮೊಗ್ರಾಲ್‌ನಿಂದ ಕಲೋತ್ಸವ ನಡೆಯುವ ಶಾಲೆಗೆ ತೆರಳುವ ರಸ್ತೆ ಬದಿ ಶಾಲಾ ಆವರಣಗೋಡೆಯಲ್ಲಿ ಕೇರಳದ ಕಲೆಗಳನ್ನು ಬಿಂಬಿಸುವ ಚಿತ್ರಗಳನ್ನು ರಚಿಸಿದ್ದು, ಇದು ಕಲೋತ್ಸವಕ್ಕೆ ತೆರಳುವವರನ್ನು ಆಕರ್ಷಿಸುತ್ತಿದೆ. ಅದೇ ರೀತಿ ಶಾಲಾ ಪ್ರವೇಶದ್ವಾರದ ಸಮೀಪ ಸ್ಥಾಪಿಸಲಾಗಿರುವ ಫಲಕವೊಂದರಲ್ಲಿ ಕಾಸರಗೋಡಿನ ಸಪ್ತಭಾಷೆಗಳನ್ನು ಗುರುತಿಸಲಾಗಿದೆ. ಅದರ ಜೊತೆಗೆಕಾಸರಗೋಡಿನ ಪ್ರಸಿದ್ಧ ಆರಾಧನಾಲಯಗಳು, ಕಲೆಗಳು, ಬೇಕಲಕೋಟೆ, ರಾಣಿಪುರಂನಂತಹ ಪ್ರವಾಸಿ ಕೇಂದ್ರಗಳು, ಚಂದ್ರಗಿರಿ ಹೊಳೆ, ಕಾಸರಗೋಡು ರೈಲು ನಿಲ್ದಾಣ, ನೂತನವಾಗಿ ನಿರ್ಮಿಸಲಾದ ಷಟ್ಪಥ ರಾಷ್ಟ್ರೀಯ ಹೆದ್ದಾರಿ ಮೊದಲಾದವು ಗಳನ್ನು ಚಿತ್ರಿಸಲಾಗಿದೆ. ಒಟ್ಟಾರೆಯಾಗಿ ಕಲೋತ್ಸವ ವೀಕ್ಷಿಸಲು ತಲುಪುವ ಕಲಾಭಿಮಾನಿಗಳಿಗೆ, ಕಲಾ ಪ್ರತಿಭೆಗಳಿಗೆ ಇದೊಂದು ಅವಿಸ್ಮರಣೀಯ ಅನುಭವ ವನ್ನು ನೀಡುವುದರಲ್ಲಿ ಸಂಶಯವಿಲ್ಲ.

ಇದೀಗ ಶಾಲಾ ವಿದ್ಯಾರ್ಥಿಗಳಿಗೆ ಕ್ರಿಸ್ಮಸ್ ರಜಾಕಾಲವಾಗಿದ್ದು, ಇದೇ ಸಂದರ್ಭದಲ್ಲಿ ಕಲೋತ್ಸವವನ್ನು ನಡೆ ಸುವುದರಿಂದ ರಜೆಯ ಮಜಾವನ್ನು ಇಲ್ಲದಾಗಿಸಿದೆಯೆಂದು ಕೆಲವು ವಿದ್ಯಾರ್ಥಿಗಳು ಅಭಿಪ್ರಾಯಪಡು ತ್ತಿದ್ದಾರೆ. ಕಾಸರಗೋಡಿನ ಉತ್ತರ ಭಾಗದಲ್ಲಿ ನೆಲೆಗೊಂಡಿರುವ ಬಹುಭಾಷಾ ಪ್ರದೇಶವಾದ ಕುಂಬಳೆ ಪಂಚಾಯತ್‌ನ ಪುಟ್ಟ ಗ್ರಾಮದಲ್ಲಿ ನಡೆಯುತ್ತಿರುವ ಕಲೋತ್ಸವ ಅನೇಕ ಪ್ರತಿಭಾನ್ವಿತ ವಿದ್ಯಾರ್ಥಿ ಕಲಾ ವಿದರಿಗೆ ತಮ್ಮ ಪ್ರತಿಭೆ ಪ್ರರ್ಶನಕ್ಕೆ ವೇದಿಕೆಯಾಗಲಿದೆ.

You cannot copy contents of this page