ಕಲ್ಲಿಕೋಟೆ: ಪೆರಿಂದಲ್‌ಮಣ್ಣ ದೃಶ್ಯ ಕೊಲೆ ಪ್ರಕರಣದ ಆರೋಪಿ ವಿನೀಶ್ ಕುದಿರವಟ್ಟಂ ಮಾನಸಿಕ ಆರೋಗ್ಯ ಕೇಂದ್ರದಿಂದ ಪರಾರಿಯಾಗಿದ್ದಾನೆ. ಇಲ್ಲಿನ ೩ನೇ ವಾರ್ಡ್‌ನಲ್ಲಿ ವಿನೀಶ್ ಚಿಕಿತ್ಸೆಯಲ್ಲಿದ್ದನು. ಶೌಚಾಲಯದ ಗೋಡೆ ಕೊರೆದು ಈತ ಪರಾರಿಯಾಗಿದ್ದಾನೆ. ಬಳಿಕ ಆವರಣಗೋಡೆಯನ್ನು ಹಾರಿದ್ದಾನೆ. ಈತನ ಪತ್ತೆಗಾಗಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ವಿವಾಹ ವಿನಂತಿಯನ್ನು ತಿರಸ್ಕರಿಸಿದ ಪೆರಿಂದಲ್‌ಮಣ್ಣದ ದೃಶ್ಯ ಎಂಬ ಯುವತಿಯನ್ನು ಕೊಲೆಗೈದ ಪ್ರಕರಣದಲ್ಲಿ ಈತ ಆರೋಪಿಯಾಗಿದ್ದಾನೆ. ಕಣ್ಣೂರು ಸೆಂಟ್ರಲ್ ಜೈಲ್‌ನಲ್ಲಿದ್ದ ಈತನನ್ನು ಮಾನಸಿಕ ಅಸ್ವಸ್ಥತೆ ಪ್ರಕಟಪಡಿಸಿದ ಹಿನ್ನೆಲೆಯಲ್ಲಿ ಕುದಿರವಟ್ಟಂ ಮಾನಸಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.







