ಬೆಳ್ಳೂರಿನಲ್ಲಿ ಶಾಲೆಗೆ ನಿರ್ಮಿಸಿದ ಬೇಲಿ ವಿದ್ಯಾರ್ಥಿಗಳಿಂದ ನಾಶ

ಮುಳ್ಳೇರಿಯ: ಬೆಳ್ಳೂರು ಸರಕಾರಿ ಪ್ರೌಢಶಾಲೆಯ ಒಂದು ಭಾಗದಲ್ಲಿ  ಸ್ಥಳವನ್ನು ಸ್ವಾಧೀನಪಡಿಸಿ ನಿರ್ಮಿಸಿದ ತಂತಿ ಬೇಲಿ ಹಾಗೂ ಕಾಂಕ್ರೀಟ್ ಪಿಲ್ಲರ್‌ಗಳನ್ನು ವಿದ್ಯಾರ್ಥಿಗಳು ಹಾಗೂ ನಾಗರಿಕರು ಸೇರಿ ನಾಶಗೊಳಿಸಿದ್ದಾರೆ. ೧೯೪೭ ಆಗಸ್ಟ್ ೧೫ರಂದು ಸ್ಥಳೀಯ ನಿವಾಸಿಯಾದ ಸುಬ್ರಹ್ಮಣ್ಯ ಎಂಬವರು ಪ್ರಸ್ತುತ ಸ್ಥಳವನ್ನು ಶಾಲೆ ನಿರ್ಮಿಸಲು ಸರಕಾರಕ್ಕೆ ನೀಡಿದ್ದರೆಂದು ಹೇಳಲಾಗುತ್ತಿದೆ. ಪ್ರಸ್ತುತ ಸ್ಥಳದಲ್ಲಿ ಶಾಲಾ ಕಟ್ಟಡಗಳನ್ನು ನಿರ್ಮಿಸಿ ತರಗತಿಗಳನ್ನು ನಡೆಸಲಾಗುತ್ತಿದೆ. ಈ ಮಧ್ಯೆ ಸ್ಥಳದ ಮಧ್ಯದಲ್ಲಾಗಿ ರಸ್ತೆ ನಿರ್ಮಿಸಲಾಗಿದೆ. ಶಾಲೆಯ ಕಿಂಡರ್‌ಗಾರ್ಟನ್ ವಿಭಾಗದಿಂದ ಎಲ್‌ಪಿ, ಯುಪಿ ವಿಭಾಗ ಹಾಗೂ ಅಡುಗೆ ಕೊಠಡಿ, ಶಾಲಾ ಮೈದಾನ ಒಂದು ಭಾಗದಲ್ಲಿ ಹಾಗೂ ಹೈಸ್ಕೂಲ್ ವಿಭಾಗ ಮತ್ತೊಂದು ಭಾಗದಲ್ಲಿದೆ. ಆದಿತ್ಯವಾರ ಸಂಜೆ ಸ್ಥಳವನ್ನು ಅಳತೆ ಮಾಡಿ ಕಾಂಕ್ರೀಟ್ ಕಂಬ ನಿರ್ಮಿಸಿ ಅದಕ್ಕೆ ತಂತಿ ಬೇಲಿ ನಿರ್ಮಿಸಲಾಗಿತ್ತು. ನಿನ್ನೆ ಕ್ರೀಡಾ ತರಬೇತಿ ಸಮಯದಲ್ಲಿ ವಿದ್ಯಾರ್ಥಿಗಳು ಬೇಲಿಯನ್ನು ಹಾಗೂ ಕಾಂಕ್ರೀಟ್ ಕಂಬಗಳನ್ನು ನಾಶಗೊಳಿಸಿದ್ದಾರೆ. ಶಾಲೆಗೆ ಕೊಡುಗೆಯಾಗಿ ನೀಡಿದ ಸ್ಥಳಕ್ಕಿಂತ ಹೆಚ್ಚು ಸ್ಥಳ ಶಾಲೆಗಾಗಿ ಸ್ವಾಧೀನಪಡಿ ಲಾಗಿದೆ ಎಂದು ಆರೋಪಿಸಿ ಸ್ಥಳದ ಮಾಲಕರ ಮಕ್ಕಳು ಕಾನೂನು ಕ್ರಮ ಮುಂದುವರಿಸಿದ್ದಾರೆ. ಈ ಪ್ರಕರಣದಲ್ಲಿ ಸ್ಥಳದ ಮಾಲಕರಿಗೆ ಅನುಕೂಲವಾಗಿ ತೀರ್ಪು ಬಂದಿದೆ ಎಂದೂ, ತೀರ್ಪಿನ ಪ್ರತಿಯನ್ನು ಪೊಲೀಸರಿಗೆ ನೀಡಲಾಗಿದೆ ಎಂದು ಸ್ಥಳದ ಮಾಲಕರು ತಿಳಿಸಿದ್ದಾರೆ. ಆದರೆ ಅಂತಹ ತೀರ್ಪು ಜಿಲ್ಲಾ ಪಂಚಾಯತ್‌ಗೊ, ಜಿಲ್ಲಾಧಿಕಾರಿಗೊ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೊ ಅಥವಾ ಶಿಕ್ಷಣ ಇಲಾಖೆಗೊ ನಿನ್ನೆ ವರೆಗೆ ಲಭಿಸಿಲ್ಲವೆಂದು  ಹೇಳಲಾಗುತ್ತಿದೆ.

ಈ ವಿವಾದ ಸ್ಥಳದಲ್ಲಿ ಅಲ್ಪ ಅಶಾಂತಿ ಸೃಷ್ಟಿಸಿರುವುದಾಗಿ ಹೇಳಲಾಗುತ್ತಿದೆ. ಖಾಸಗಿ ಸ್ಥಳವನ್ನು ಶಾಲೆಗೆ ಕೊಡುಗೆಯಾಗಿ ನೀಡಿ ಶಿಕ್ಷಣ ಇಲಾಖೆ ಅದನ್ನು ವಹಿಸಿಕೊಂಡು ಕಟ್ಟಡವನ್ನು ನಿರ್ಮಿಸುವುದರ ಮೊದಲು ಸ್ಥಳದ ಮಾಲಕತ್ವವನ್ನು ರಾಜ್ಯಪಾಲರ ಹೆಸರಲ್ಲಿ ಸರಕಾರ ನೋಂದಾಯಿಸಿ ಪಡೆದುಕೊಳ್ಳಬೇಕಾಗಿತ್ತೆಂದು ಕಾನೂನು ತಜ್ಞರು ಹೇಳುತ್ತಿದ್ದಾರೆ. ಹಾಗೆ ಮಾಡಿದ್ದಲ್ಲಿ ದಾಖಲುಪತ್ರದಲ್ಲಿ ಒಳಗೊಂಡ ಸ್ಥಳದ ಮೇಲೆ ಸರಕಾರಕ್ಕೆ ಹಕ್ಕಿದೆ ಎಂದೂ ಇಲ್ಲದಿದ್ದಲ್ಲಿ ಸ್ಥಳದ ಮಾಲಕತ್ವ ಅದರ ಮಾಲಕನಿಗಾಗಿರುವುದೆಂದು ಅವರು ತಿಳಿಸಿದ್ದಾರೆ.

RELATED NEWS

You cannot copy contents of this page