ಕಾಸರಗೋಡು: ಜಿಲ್ಲೆಯಲ್ಲಿ ವಿವಿಧ ಜ್ವರಗಳು ವ್ಯಾಪಕಗೊಂಡಿದೆ. ಎಚ್೧ಎನ್೧ ಬಾಧಿಸಿ ಮಹಿಳೆ, ಹಳದಿಕಾಮಾಲೆ ಬಾಧಿಸಿ ಯುವಕ ಮೃತಪಟ್ಟಿದ್ದಾರೆ. ಇದೇ ವೇಳೆ ಅಮೀಬಿಕ್ ಮೆದುಳುಜ್ವರ ಬಾಧಿಸಿದ ಯುವಕನ ಸ್ಥಿತಿ ಅತೀ ಗಂಭೀರವಾ ಗಿದೆಯೆಂದು ತಿಳಿದುಬಂದಿದೆ.
ಅಜಾನೂರು ಮಾಣಿಕೋತ್ತ್‌ನ ಕರುಣಾಕರನ್ ಎಂಬವರ ಪತ್ನಿ ಯಶೋಧ ಎಚ್1ಎನ್1 ಬಾಧಿಸಿ ಮೃತಪಟ್ಟ ದುರ್ದೈವಿಯಾಗಿದ್ದಾರೆ. ತೀವ್ರ ಜ್ವರ ಹಾಗೂ ಕೆಮ್ಮ ಕಾಣಿಸಿಕೊಂಡ ಯಶೋಧರನ್ನು ಮೊದಲು ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಬಳಿಕ ಎಚ್೧ಎನ್೧ನ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ತಜ್ಞ ಚಿಕಿತ್ಸೆಗಾಗಿ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಮೂರು ದಿನಗಳ ಕಾಲ ಅಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯಲ್ಲಿದ್ದಾಗಲೇ ಯಶೋಧ ಸಾವಿಗೀಡಾಗಿದ್ದಾರೆ. ಇವರೊಂದಿಗೆ ಹತ್ತಿರದ ಸಂಪರ್ಕದಲ್ಲಿದ್ದ ಏಳು ಮಂದಿಗೆ ಜ್ವರ ಹಾಗೂ ಕೆಮ್ಮು ಸಹಿತ ರೋಗ ಲಕ್ಷಣಗಳು ಕಂಡುಬಂದಿರುವುದಾಗಿ ಹೇಳಲಾಗುತ್ತಿದೆ. ಆದ್ದರಿಂದ ಅವರ ಗಂಟಲ ದ್ರವದ ಸ್ಯಾಂಪಲ್ ಸಂಗ್ರಹಿಸಿ ತಪಾಸಣೆಗೆ ಕಳುಹಿಸಿಕೊಡಲಾಗಿದೆ. ಈ ಪ್ರದೇಶದಲ್ಲಿ ಜಾಗ್ರತೆ ಪಾಲಿಸುವಂತೆ ಆರೋಗ್ಯ ವಿಭಾಗ ನಿರ್ದೇಶ ನೀಡಿದೆ.
ಹಳದಿ ಕಾಮಾಲೆ ಬಾಧಿಸಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ನೀರ್ಚಾಲು ಬಳಿಯ ಯುವಕ ಮೃತಪಟ್ಟಿದ್ದಾರೆ. ನೀರ್ಚಾಲು ಸಮೀಪದ ಏಣಿಯರ್ಪುವಿನ ಹೇಮಚಂದ್ರ (36) ಮೃತಪಟ್ಟ ಯುವಕ. ಅಸೌಖ್ಯ ಬಾಧಿಸಿದ್ದ ಇವರು ಒಂದು ತಿಂಗಳಿಂದ ಚಿಕಿತ್ಸೆಯಲ್ಲಿದ್ದರು. ನಿನ್ನೆ ರಾತ್ರಿ ಸಾವು ಸಂಭವಿಸಿದೆ. ಹೇಮಚಂದ್ರ ಬೆಂಗಳೂರಿನಲ್ಲಿ ಖಾಸಗಿ ಸಂಸ್ಥೆಯೊಂದರ ನೌಕರನಾಗಿದ್ದರು. ಗೋಪಾಲ ರಾವ್-ಸರೋಜಿನಿ ದಂಪತಿಯ ಪುತ್ರನಾದ ಮೃತರು ಪತ್ನಿ ಅಶ್ವಿನಿ, ಪುತ್ರಿ ನಿಹಾರಿಕ, ಸಹೋದರಿ ಮಮತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ಇದೇ ವೇಳೆ ಅಮೀಬಿಕ್ ಮೆದುಳು ಜ್ವರ ಬಾಧಿಸಿದ 18ರ ಹರೆಯದ ಯುವಕನ ಸ್ಥಿತಿ ಗಂಭೀರವಾಗಿದೆಯೆಂದು ವರದಿಯಾ ಗಿದೆ. ಅಂಬಲತ್ತರ ಪೊಲೀಸ್ ಠಾಣೆ ವ್ಯಾಪ್ತಿಯ ಯುವಕ ನನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಸೋಮವಾರ ನಡೆಸಿದ ತಪಾಸಣೆಯಲ್ಲಿ ಈತನಿಗೆ ರೋಗ ದೃಢೀಕರಿಸಲಾಗಿದೆ. ಒಂದು ವಾರ ಹಿಂದೆ ಯುವಕ ಹಾಗೂ ಸ್ನೇಹಿತರು ಕೆರೆಯಲ್ಲಿ ಸ್ನಾನಮಾಡಿ ದ್ದಾರೆನ್ನಲಾಗಿದೆ. ಅನಂತರ ಅಸೌಖ್ಯ ಕಾಣಿಸಿಕೊಂಡಿತ್ತೆನ್ನಲಾಗಿದೆ. ಯುವಕ ನಿಗೆ ರೋಗ ದೃಢೀಕರಿಸಿದ ಹಿನ್ನೆಲೆಯಲ್ಲಿ ರೋಗಸೋಂಕು ತಗಲಿದೆಯೆಂದು ಸಂಶಯಿಸಲಾದ ಅಂಬಲತ್ತರದ ಕೆರೆಯಲ್ಲಿ ಯಾರೂ ಸ್ನಾನಮಾಡ ಕೂಡದೆಂದು ಪೊಲೀಸರು ಹಾಗೂ ಆರೋಗ್ಯ ಇಲಾಖೆ ನಿರ್ದೇಶ ನೀಡಿದೆ. ಒಂದು ವಾರದಿಂದ ಈ ಕೆರೆಯಲ್ಲಿ ಸ್ನಾನ ಮಾಡಿದವರು ವೈದ್ಯಕೀಯ ತಪಾಸಣೆ ಗೊಳಗಾಗಬೇಕೆಂದು ಅಧಿಕಾರಿಗಳು ತಿಳಿಸಿದ್ದಾರೆ. ಶಾಲೆ ಮಕ್ಕಳು, ಯುವಕರು ಹಾಗೂ ರಸ್ತೆ ಬದಿ ವಾಹನ ನಿಲ್ಲಿಸಿ ಪ್ರಯಾಣಿಕರೂ ಈ ಕೆರೆಯಲ್ಲಿ ಸ್ನಾನ ಮಾಡುತ್ತಿದ್ದಾರೆಂದು ಸ್ಥಳೀಯರು ತಿಳಿಸಿದ್ದಾರೆ.
ರಾಜ್ಯದ ವಿವಿಧೆಡೆಗಳಲ್ಲೂ ವಿವಿಧ ಸಾಂಕ್ರಾಮಿಕ ಜ್ವರಗಳು ತೀವ್ರ ಗೊಂಡಿರುವುದಾಗಿ ಹೇಳಲಾಗುತ್ತಿದೆ. ಈವರ್ಷ ಇದುವರೆಗೆ ಅಮೀಬಿಕ್ ಮೆದುಳುಜ್ವರ ಬಾಧಿಸಿ ರಾಜ್ಯದಲ್ಲಿ 41 ಮಂದಿ ಮೃತಪಟ್ಟಿದ್ದಾರೆ. ಈ ವರ್ಷ ಒಟ್ಟು 155 ಮಂದಿಗೆ ರೋಗ ದೃಢೀಕರಿಸಲಾಗಿದೆ. ಕಳೆದ ವರ್ಷ ಅಮೀಬಿಕ್ ಮೆದುಳುಜ್ವರ ಬಾಧಿಸಿ ರಾಜ್ಯದಲ್ಲಿ ೪೭ಮಂದಿ ಮೃತಪಟ್ಟಿರು ವುದಾಗಿ ವರದಿಯಾಗಿದೆ.







