ಕಾಸರಗೋಡು: ಭಾರತೀಯ ಸೇನಾಪಡೆಗೆ ಯೋಧರ ನೇಮಕಾತಿಗಿರುವ ಅಗ್ನಿವೀರ್ ಆರ್ಮಿ ರಿಕ್ರೂಟ್ಮೆಂಟ್ ರ್ಯಾಲಿ ವಿದ್ಯಾನಗರದ ನಗರಸಭಾ ಕ್ರೀಡಾಂಗಣದಲ್ಲಿ ಇಂದು ಬೆಳಿಗ್ಗೆ ಆರಂಭಗೊಂಡಿತು. ರ್ಯಾಲಿಗೆ ಹೆಚ್ಚುವರಿ ಜಿಲ್ಲಾ ದಂಡನಾಧಿಕಾರಿ (ಎಡಿಎಂ) ಪಿ. ಅಖಿಲ್ ಧ್ವಜ ಹಾರಿಸಿ ಚಾಲನೆ ನೀಡಿದರು. ನೇಮಕಾತಿ ಇಂದಿನಿಂದ ಐದು ದಿನಗಳ ಕಾಲ ಮುಂದುವರಿಯಲಿದೆ. ಇದರಲ್ಲಿ ಕಾಸರಗೋಡಿನಿಂದ ತೃಶೂರ್ ತನಕದ 7 ಜಿಲ್ಲೆಗಳು ಹಾಗೂ ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪ್, ಮಾಹಿ ಎಂಬೆಡೆಗಳ 4೦೦೦ದಷ್ಟು ಉದ್ಯೋಗಾರ್ಥಿಗಳು ಈ ರ್ಯಾಲಿಯಲ್ಲಿ ಭಾಗವಹಿಸುತ್ತಿದ್ದಾರೆ.
ಆನ್ಲೈನ್ ಮೂಲಕ ನಡೆಸಲಾದ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಮಾತ್ರವೇ ನೇಮಕಾತಿ ರ್ಯಾಲಿ ಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ. ರ್ಯಾಲಿಯಲ್ಲಿ ಪಾಲ್ಗೊಳ್ಳುವವರ ದೈಹಿಕ ಹಾಗೂ ಕ್ರೀಡಾ ಸಾಮರ್ಥ್ಯವನ್ನು ಪರಿಶೀಲಿಸಿ ಅದರ ಆಧಾರದಲ್ಲಿ ಅಗ್ನಿವೀರ್ ಆರ್ಮಿಗೆ ಸೇರ್ಪಡೆಗೊಳಿಸಲಾಗುವುದು. ಕಲ್ಲಿಕೋಟೆ, ಆರ್ಮಿ ರಿಕ್ರೂಟ್ಮೆಂಟ್ ಕಚೇರಿಯ ನೇತೃತ್ವದಲ್ಲಿ ಈ ರ್ಯಾಲಿ ನಡೆಯುತ್ತಿದೆ.







