ಉಪ್ಪಳ: ಉಪ್ಪಳ ರೈಲ್ವೇ ನಿಲ್ದಾಣ ರಸ್ತೆ ಬದಿ ಹಲವು ಪ್ಲಾಟ್ಗಳಿದ್ದು, ಇದರಲ್ಲಿ ಕೆಲವು ಪ್ಲಾಟ್ಗಳ ಮಲಿನ ನೀರನ್ನು ರಸ್ತೆಯ ಚರಂಡಿಗೆ ಹರಿದುಬರುತ್ತಿದೆ. ಇದರಿಂದ ಚರಂಡಿ ತುಂಬಿ ರಸ್ತೆಗೆ ಹರಿದು ಪರಿಸರವಿಡೀ ದುರ್ವಾಸನೆ ತುಂಬಿಕೊಂಡು ಸ್ಥಳೀಯ ಕುಟುಂಬಗಳು ಹಾಗೂ ಪಾದಚಾರಿಗಳಿಗೆ ಸಮಸ್ಯೆ ಉಂಟಾಗಿದೆ. ಇದರಿಂದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಂ.ಕೆ. ಬ್ರದರ್ಸ್ ಉಪ್ಪಳ ಇದರ ಸದಸ್ಯರು ಹಾಗೂ ಸ್ಥಳೀಯರು ಸೇರಿ ನಿನ್ನೆ ಬೆಳಿಗ್ಗೆ ರೈಲ್ವೇ ನಿಲ್ದಾಣ ರಸ್ತೆ ಬದಿಯ ಚರಂಡಿಯ ಸ್ಲಾಬ್ಗಳನ್ನು ಜೆಸಿಬಿ ಮೂಲಕ ತೆಗೆದು ಪರಿಶೀಲಿಸಿದಾಗ ಪ್ಲಾಟ್ಗಳಿಂದ ಚರಂಡಿಗೆ ಪೈಪ್ ಅಳವಡಿಸಿ ಮಲಿನ ನೀರು ಹರಿಯಬಿಟ್ಟಿರು ವುದು ಪತ್ತೆಯಾಗಿದೆ. ಈ ಬಗ್ಗೆ ಸ್ಥಳೀಯರು ಹಾಗೂ ಎಂ.ಕೆ. ಬ್ರದರ್ಸ್ ನೀಡಿದ ದೂರಿನಂತೆ ಪಂಚಾಯತ್ ಅಧ್ಯಕ್ಷ ಗೋಲ್ಡನ್ ಅಬ್ದುಲ್ ರಹಿಮಾನ್ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹಲವಾರು ವರ್ಷಗಳಿಂದಲೂ ಮಲಿನ ನೀರು ಚರಂಡಿಯಲ್ಲಿ ಹರಿಯುತ್ತಿರುವುದರಿಂದ ಈ ಪರಿಸರದ ಹಲವಾರು ಮನೆಗಳ ಬಾವಿಯ ನೀರು ಕಲುಷಿತಗೊಂಡಿದ್ದು, ಉಪಯೋಗಿಸಲು ಸಾ ಸಾಧ್ಯವಾಗುತ್ತಿಲ್ಲವೆಂದು ಮನೆಯವರು ತಿಳಿಸಿದ್ದಾರೆ. ಅಲ್ಲದೆ ಈ ಪರಿಸರದಲ್ಲಿ ಮಕ್ಕಳಿಗೆ ಹಳದಿ ಕಾಮಲೆ, ಜ್ವರ ಮೊದಲಾದ ಅನಾರೋಗ್ಯ ಹರಡಿರುವುದಾಗಿ ಹೇಳಲಾಗುತ್ತಿದೆ. ಈ ಪರಿಸರದಲ್ಲಿ ವ್ಯಾಪಾರ ಸಂಸ್ಥೆಗಳು, ಆಸ್ಪತ್ರೆಗಳು, ಹಲವಾರು ಮನೆಗಳು ಇವೆ. ಅಲ್ಲದೆ ಶಾಲೆ, ಕಾಲೇಜು ವಿದ್ಯಾರ್ಥಿಗಳ ಸಹಿತ ಹಲವಾರು ಮಂದಿ ಸಂಚರಿಸುವ ರಸ್ತೆ ಇದಾಗಿದೆ. ಮಲಿನ ನೀರು ಸಾರ್ವಜನಿಕ ಸ್ಥಳಕ್ಕೆ ಬಿಡುತ್ತಿರುವ ಪ್ಲಾಟ್ ಮಾಲೀಕರ ವಿರುದ್ಧ ಸಂಬಂಧಪಟ್ಟ ಪಂಚಾಯತ್, ಆರೋಗ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಹಾಗೂ ಎಂ.ಕೆ. ಬ್ರದರ್ಸ್ಉಪ್ಪಳ ಆಗ್ರಹಿಸಿದೆ.







