ಕುಂಬಳೆ: ಕುಂಬಳೆ ಮೀನು ಮಾರುಕಟ್ಟೆ ಬಳಿಯ ಚರಂಡಿಯಲ್ಲಿ ತ್ಯಾಜ್ಯಗಳು ತುಂಬಿಕೊಂಡ ಪರಿಣಾಮ ಅದರಿಂದ ಹೊರ ಸೂಸುವ ದುರ್ನಾ ತದಿಂದ ನಾಗರಿಕರು ಸಮಸ್ಯೆಗೀಡಾಗಿ ದ್ದಾರೆ. ಹೊಸತಾಗಿ ನಿರ್ಮಿಸಿದ ಮೀನು ಮಾರುಕಟ್ಟೆಯನ್ನು ತೆರೆದು ಕೊಡದಿ ರುವುದರಿಂದ ಮೀನು ಮಾರಾಟ ಕೇಂದ್ರ ಬಳಿಯ ಚರಂಡಿಗಳಿಗೆ ತ್ಯಾಜ್ಯಗಳನ್ನು ಎಸೆಯಲಾಗುತ್ತಿದೆ. ಅವುಗಳು ಜೀರ್ಣಿಸಿ ದುರ್ನಾತ ಬೀರುತ್ತಿದ್ದು, ಇದು ಸ್ಥಳೀಯರಿಗೆ ಹಾಗೂ ವ್ಯಾಪಾರಿಗಳಿಗೆ ಭಾರೀ ಸಮಸ್ಯೆ ಉಂಟುಮಾಡುತ್ತಿದೆ. ತ್ರಿಸ್ತರ ಪಂಚಾಯತ್ ಚುನಾವಣೆ ಘೋಷಣೆಯಾಗಿರುವುದರಿಂದ ನಿರ್ಮಾಣ ಪೂರ್ಣಗೊಂಡ ಮೀನು ಮಾರುಕಟ್ಟೆ ತೆರೆದು ಕೊಡುವಲ್ಲಿ ಅಡಚಣೆ ಎದುರಾಗಿರುವುದಾಗಿ ಹೇಳಲಾಗುತ್ತಿದೆ.
ಈ ಹಿಂದೆ ಇದ್ದ ಹಳೆಯ ಮೀನು ಮಾರುಕಟ್ಟೆಯನ್ನು ಮುರಿದು ತೆರವು ಗೊಳಿಸಿ ಆಧುನಿಕ ವ್ಯವಸ್ಥೆಗಳೊಂದಿಗೆ ಹೊಸ ಮೀನು ಮಾರುಕಟ್ಟೆ ನಿರ್ಮಿಸಲಾಗಿದೆ. ಮೀನು ಮಾರಾಟ ಕೇಂದ್ರ ಬಳಿಯ ಚರಂಡಿಗೆ ತ್ಯಾಜ್ಯಗಳನ್ನು ಎಸೆಯುವುದರ ವಿರುದ್ಧ ಹಲವು ಬಾರಿ ಪಂಚಾಯತ್ ಅಧಿಕಾರಿಗಳು, ಎನ್ಫೋರ್ಸ್ಮೆಂಟ್ ಸ್ಕ್ವಾಡ್, ಆರೋಗ್ಯ ವಿಭಾಗ ಮೀನು ಮಾರುಕಟ್ಟೆ ಕಾರ್ಮಿಕರಿಗೆ ಹಾಗೂ ವ್ಯಾಪಾರಿಗಳಿಗೆ ಮುನ್ನೆಚ್ಚರಿಕೆ ನೀಡಿತ್ತು.
ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿ ಸುವ ಕುಂಬಳೆ ಗ್ರಾಮ ಪಂಚಾಯತ್ನ ಹಸಿರು ಕ್ರಿಯಾಸೇನೆಯನ್ನು ಮೀನು ಮಾರಾಟ ಕಾರ್ಮಿಕರು ಹಾಗೂ ಇತರರು ಉಪಯೋಗಿಸುತ್ತಿಲ್ಲವೆಂಬ ಆರೋಪವೂ ಇದೆ. ಈ ಹಿಂದೆ ಮೀನು ಮಾರುಕಟ್ಟೆ ಬಳಿಯ ಅಂಚೆ ಕಚೇರಿ ಸ್ಥಳದಲ್ಲಿ ವ್ಯಾಪಕವಾಗಿ ತ್ಯಾಜ್ಯಗಳನ್ನು ಎಸೆಯಲಾಗುತ್ತಿತ್ತು. ಬಾಡಿಗೆ ಕಟ್ಟಡದಲ್ಲಿ ಕಾರ್ಯಾಚರಿಸುವ ಕುಂಬಳೆ ಅಂಚೆ ಕಚೇರಿಗೆ ಅಂಚೆ ಇಲಾಖೆ ಅಲ್ಲಿ ಸ್ವಂತ ಕಟ್ಟಡ ನಿರ್ಮಾಣ ಕೆಲಸ ಆರಂಭಿಸುವುದರೊಂದಿಗೆ ತ್ಯಾಜ್ಯಗಳನ್ನು ಚರಂಡಿಗೆ ಎಸೆಯುವ ಸ್ಥಿತಿ ಉಂಟಾಯಿತು. ಇದು ಮಳೆಗಾಲದಲ್ಲಿ ನೀರು ಹರಿದು ಹೋಗಲು ಅಡ್ಡಿಯಾಗಿದ್ದು, ವ್ಯಾಪಾರಿ ಸಂಸ್ಥೆಗಳಿಗೆ ನೀರು ತುಂಬುವ ಸ್ಥಿತಿಯೂ ಉಂಟಾಗುತ್ತಿದೆ. ಮೀನು ಮಾರುಕಟ್ಟೆಯನ್ನು ಮೀನು ಮಾರಾಟಕ್ಕಾಗಿ ತೆರೆದುಕೊಡಲು ಆಡಳಿತ ಸಮಿತಿ ಕ್ರಮ ಕೈಗೊಳ್ಳಬೇಕೆಂದು ನಾಗರಿಕರು, ವ್ಯಾಪಾರಿಗಳು ಹಾಗೂ ಮೀನು ಕಾರ್ಮಿಕರು ಒತ್ತಾಯಿಸುತ್ತಿದ್ದಾರೆ.







